ಯೋಗವಾಸಿಷ್ಠ  ಯೋಗವಾಸಿಷ್ಠ ೩
ಯೋಗವಾಸಿಷ್ಠದ ಪೀಠಿಕೆ - ೩
ಸುತೀಕ್ಷ್ಣನೆಂಬ ಬ್ರಾಹ್ಮಣನು ಅಗಸ್ತಿಮುನಿಗಳ ಮುಂದೆ ತನ್ನ ಸಂದೇಹವನ್ನಿಟ್ಟಾಗ, ಅವರು ಒಂದು ಕಥೆಯ ಮೂಲಕವೇ ಆ ಸಂದೇಹವನ್ನು ಪರಿಹರಿಸಲು ಪ್ರಾರಂಭಿಸಿದ್ದಾರೆ. ಮೋಕ್ಷಕ್ಕೆ ಕರ್ಮ ಸಾಧನವೋ, ಜ್ಞಾನ ಸಾಧನವೋ, ಎರಡೂ ಸಾಧನವೋ ಎಂಬುದು ಇಲ್ಲಿ ಆತನ ಸಂದೇಹ. ಆತ ಪ್ರಾರಂಭಿಸಿದ ಕಥೆ ಹೀಗಿದೆ - ಅಗ್ನಿವೇಶ್ಯನೆಂಬ ಋಷಿಯ ಮಗನಾದ ಕಾರುಣ್ಯ ಎಂಬುವನು ವೇದ-ವೇದಾಂಗಗಳ ಅಧ್ಯಯನವನ್ನು ಮುಗಿಸಿಕೊಂಡು ಬಂದರೂ ಕರ್ಮಗಳನ್ನಾಗಲೀ, ಉಪಾಸನೆಯನ್ನಾಗಲೀ ಮಾಡುತ್ತಿರಲಿಲ್ಲ.
ವೇದ-ವೇದಾಂಗಗಳ ಅಧ್ಯಯನವಾದರೂ ತನ್ನ ಮಗನ ಸ್ಥಿತಿ ಹೀಗಿರುವುದನ್ನು ಕಂಡ ಅಗ್ನಿವೇಶ್ಯರು ಮಗನನ್ನು ಕೇಳಿದರು - ‘ಮಗನೇ! ನೀನೇಕೆ ಶಾಸ್ತ್ರವಿಹಿತವಾಗಿರುವ ನಿನ್ನ ಕರ್ಮಗಳನ್ನು ಮಾಡುತ್ತಿಲ್ಲ? ಕರ್ಮಗಳನ್ನು ಮಾಡದಿದ್ದರೆ ಯಾವುದಾದರೂ ಸಿದ್ಧಿ ಉಂಟಾಗುತ್ತದೆ ಎಂಬುದನ್ನು ನೀನು ಓದಿದ ಶಾಸ್ತ್ರಗಳಲ್ಲಿ ಎಲ್ಲಿಯಾದರೂ ಹೇಳಿದ್ದಾರೆಯೇ? ನೀನು ಕರ್ಮಗಳನ್ನು ಮಾಡದಿರುವುದಕ್ಕೆ ಕಾರಣವೇನು?’ ಕಾರುಣ್ಯನು ಉತ್ತರಿಸಿದನು - ‘ನನಗೊಂದು ದೊಡ್ಡ ಸಂದೇಹ ಮನಸ್ಸಿನಲ್ಲಿ ಮೂಡಿದೆ. ಜೀವಿಸಿರುವವರೆಗೂ ಅಗ್ನಿಹೋತ್ರ, ಸಂಧ್ಯಾವಂದನೆ, ಮುಂತಾದವುಗಳನ್ನು ಮಾಡಬೇಕೆಂದು ವೇದದಲ್ಲಿ ಹೇಳಿದ್ದಾರೆ. ಇವೆಲ್ಲವೂ ಪ್ರವೃತ್ತಿರೂಪವಾದ ಧರ್ಮ. ಅದೇ ವೇದದಲ್ಲಿಯೇ ಕರ್ಮದಿಂದ, ಸಂತತಿಯನ್ನು ಪಡೆಯುವಿಕೆಯಿಂದ, ಧನದಿಂದ ಮೋಕ್ಷ ಸಿಗುವುದಿಲ್ಲ ಎಂಬುದಾಗಿಯೂ, ತ್ಯಾಗದಿಂದಲೇ ಯತಿಗಳು ಮೋಕ್ಷವನ್ನು ಪಡೆಯುತ್ತಾರೆಂಬುದಾಗಿಯೂ ಹೇಳಿದೆ. (ಇದು ನಿವೃತ್ತಿರೂಪವಾದ ಧರ್ಮ.) ಈ ಎರಡೂ ವಿಧದ ಧರ್ಮಗಳಲ್ಲಿ ಯಾವುದನ್ನು ನಾನು ಆಚರಣೆ ಮಾಡಬೇಕು ಎಂಬುದು ನನಗಿನ್ನೂ ಸಂದಿಗ್ಧವಾಗಿದೆ. ಆದ್ದರಿಂದ ಏನನ್ನೂ ಮಾಡಲಾಗದೆ ಸುಮ್ಮನಿದ್ದೇನೆ.’
ಹಿಂದೆ ಸುತೀಕ್ಷ್ಣನಿಗೆ ಬಂದ ಸಂದೇಹವೇ ಇಲ್ಲಿ ಕಾರುಣ್ಯನಿಗೂ ಬಂದಿದೆ. ಮಗನ ಈ ಉತ್ತರವನ್ನು ಕೇಳಿ ಅಗ್ನಿವೇಶ್ಯರು ಹೇಳತೊಡಗಿದರು - ಮಗನೇ! ಇದನ್ನು ನಿನಗೆ ತಿಳಿಸಲು ಹಿಂದೆ ನಡೆದ ಒಂದು ಘಟನೆಯನ್ನು ಹೇಳುತ್ತೇನೆ. ಚೆನ್ನಾಗಿ ಮನಸ್ಸಿಟ್ಟು ಕೇಳು. ಒಮ್ಮೆ ಸುರುಚಿ ಎಂಬ ಒಬ್ಬ ಅಪ್ಸರ ಸ್ತ್ರೀ ಹಿಮಾಲಯದ ಪರ್ವತಗದಲ್ಲಿ ಕುಳಿತುಕೊಂಡಿದ್ದಳು. ಆ ಸಂದರ್ಭದಲ್ಲಿ ಆಕಾಶಮಾರ್ಗದಲ್ಲಿ ದೇವೇಂದ್ರನ ದೂತನೊಬ್ಬ ಹೋಗುತ್ತಿರುವುದು ಆಕೆಗೆ ಕಂಡಿತು. ಕುತೂಹಲದಿಂದ ಸುರುಚಿಯು ಆತನನ್ನು ಕರೆದು ಕೇಳಿದಳು - ‘ಎಲೈ ದೇವದೂತನೇ! ನೀನು ಎಲ್ಲಿಂದ ಬರುತ್ತಿದ್ದೀ? ಎಲ್ಲಿಗೆ ಹೋಗುತ್ತಿದ್ದೀ?’ ಆಗ ದೇವದೂತನು ಹೀಗೆ ಉತ್ತರಿಸಿದನು - ‘ನಾನು ಇಂದ್ರನಿಂದ ಆಜ್ಞಾಪಿಸಲ್ಪಟ್ಟವನಾಗಿ ಒಂದು ಕಾರ್ಯವನ್ನು ಮಾಡಿಕೊಂಡು, ತಿರುಗಿ ಅದನ್ನು ನಿವೇದಿಸಿಕೊಳ್ಳಲು ಹೋಗುತ್ತಿದ್ದೇನೆ. ಇಂದ್ರದೇವ ನನಗೆ ವಹಿಸಿದ ಕಾರ್ಯವೇನೆಂದರೆ - ಅರಿಷ್ಟನೇಮಿ ಎಂಬ ರಾಜನು ತನ್ನ ರಾಜ್ಯವನ್ನು ಮಗನಿಗೆ ವಹಿಸಿ, ತಾನು ಗಂಧಮಾದನ ಪರ್ವತದಲ್ಲಿ ತೀವ್ರವಾಗಿ ತಪಸ್ಸನ್ನು ಮಾಡುತ್ತಿದ್ದಾನೆ. ಅವನನ್ನು ಕಂಡುಬರುವಂತೆ ಇಂದ್ರದೇವನು ನನಗೆ ಆಜ್ಞಾಪಿಸಿದ್ದನು.’ ಸುರುಚಿಗೆ ಇದನ್ನು ಕೇಳಿ ಸಹಜವಾಗಿ ಕುತೂಹಲವುಂಟಾಯಿತು - ‘ಅರಿಷ್ಟನೇಮಿಯನ್ನು ಕಂಡುಬರುವುದು ಏತಕ್ಕೆ?’ ಆಗ ದೇವದೂತನು ಇನ್ನೂ ವಿಶದವಾಗಿ ಗಂಧಮಾದನಪರ್ವತದಲ್ಲಿ ನಡೆದದ್ದನ್ನು ಹೇಳಲು ಪ್ರಾರಂಭಿಸಿದನು.
ಕಥೆಯ ಮುಂದುವರಿದ ಭಾಗವನ್ನು ಮುಂದಿನ ಲೇಖನದಲ್ಲಿ ಗಮನಿಸೋಣ.
like 1 Comment 0
Share on Google+
ಯೋಗವಾಸಿಷ್ಠ  2
ಯೋಗವಾಸಿಷ್ಠದ ಪೀಠಿಕೆ - ೨
ಯೋಗವಾಸಿಷ್ಠದ ಆರಂಭವು ಒಂದು ಕಥೆಯ ಮೂಲಕ ಆಗುತ್ತದೆ. ಸುತೀಕ್ಷ್ಣ ಎಂಬ ಬ್ರಾಹ್ಮಣನೊಬ್ಬನಿದ್ದನು. ಆತನಿಗೆ ಮೋಕ್ಷಕ್ಕೆ ಕರ್ಮ ಕಾರಣವೋ, ಜ್ಞಾನ ಕಾರಣವೋ ಎಂಬ ಪ್ರಬಲವಾದ ಸಂಶಯವಿದ್ದಿತ್ತು. ಅದನ್ನು ಪರಿಹರಿಸಿಕೊಳ್ಳಲು ಆತನು ಅಗಸ್ತಿ ಎಂಬ ಋಷಿಗಳ ಬಳಿಗೆ ಬರುತ್ತಾನೆ. ಆಶ್ರಮಕ್ಕೆ ಬಂದು ಆದರಪೂರ್ವಕವಾಗಿ ಮುನಿಗಳಿಗೆ ವಂದಿಸಿ ತನ್ನನ್ನು ಕಾಡುತ್ತಿರುವ ಸಂಶಯವನ್ನು ಅವರಲ್ಲಿ ನಿವೇದಿಸುತ್ತಾನೆ - ‘ಪೂಜ್ಯರೇ! ತಾವು ಧರ್ಮದ ತತ್ವವನ್ನು ತಿಳಿದವರು, ಎಲ್ಲ ಶಾಸ್ತ್ರಗಳ ಬಗ್ಗೆ ಸ್ಪಷ್ಟವಾದ ತಿಳಿವಳಿಕೆಯುಳ್ಳವರು. ನನ್ನ ಮನಸ್ಸಿನಲ್ಲೊಂದು ಪ್ರಬಲವಾದ ಸಂಶಯ ಮೂಡಿಕೊಂಡಿದೆ. ಅದನ್ನು ತಾವು ಪರಿಹರಿಸಿಕೊಡಬೇಕು. ಮೋಕ್ಷಕ್ಕೆ ಕರ್ಮ ಕಾರಣವೋ, ಜ್ಞಾನ ಕಾರಣವೋ, ಅಥವಾ ಎರಡೂ ಕಾರಣವೋ?’ ಅವನ ಮಾತನ್ನು ಕೇಳಿ ಕರುಣಾಳುಗಳಾದ ಅಗಸ್ತಿ ಮುನಿಗಳು ಉತ್ತರಿಸಿದರು - ‘ಮಗು! ಪಕ್ಷಿಯೊಂದು ಆಕಾಶದಲ್ಲಿ ಹಾರುವಾಗ ಎರಡೂ ರೆಕ್ಕೆಗಳಿಂದಲೂ ಹಾರುತ್ತದೆ. ಹಾಗೆಯೇ ಜ್ಞಾನ-ಕರ್ಮಗಳೆರಡರಿಂದಲೂ ಮೋಕ್ಷ ದೊರೆಯುತ್ತದೆ. ಕೇವಲ ಕರ್ಮದಿಂದಲೂ ಮೋಕ್ಷ ದೊರೆಯುವುದಿಲ್ಲ, ಕೇವಲ ಜ್ಞಾನದಿಂದಲೂ ಮೋಕ್ಷ ದೊರೆಯುವುದಿಲ್ಲ.’ ಅಗಸ್ತಿ ಮುನಿಗಳ ಈ ಉತ್ತರದ ತಾತ್ಪರ್ಯವೇನೆಂದರೆ ಕರ್ಮವನ್ನು ಮಾಡಿದವನೇ ಜ್ಞಾನವನ್ನು ಪಡೆಯುತ್ತಾನೆ. ಕರ್ಮವೇ ಚಿತ್ತಶುದ್ಧಿಗೆ ಸಾಧನ. ಚಿತ್ತಶುದ್ಧಿಯಾಗದಿದ್ದರೆ ಜ್ಞಾನಮಾರ್ಗವು ಪ್ರಾರಂಭವಾಗುವುದಿಲ್ಲ. ಕರ್ಮದಿಂದಲೇ ಮೋಕ್ಷ ದೊರೆಯುವುದಿಲ್ಲ. ಪರಬ್ರಹ್ಮಸಾಕ್ಷಾತ್ಕಾರವೆಂಬ ಜ್ಞಾನದಿಂದಲೇ ಮೋಕ್ಷ ದೊರೆಯುತ್ತದೆ. ಆದ್ದರಿಂದ ಒಬ್ಬ ವ್ಯಕ್ತಿ ಮೊದಲು ಕರ್ಮ, ಅನಂತರ ಜ್ಞಾನ, ಹೀಗೆ ಎರಡನ್ನೂ ಅನುಷ್ಠಾನ ಮಾಡಿದಾಗಲೇ ಮೋಕ್ಷ ಪ್ರಾಪ್ತಿ. ಅಗಸ್ತಿ ಮುನಿಗಳು ಕೊಟ್ಟಿರುವ ಉದಾಹರಣೆಗಳನ್ನು ನೋಡಿದರೆ ಕರ್ಮ-ಜ್ಞಾನಗಳೆರಡೂ ಒಟ್ಟಿಗೇ ಮೋಕ್ಷಕ್ಕೆ ಸಾಧನವೆಂಬಂತೆ ಮೇಲ್ನೋಟಕ್ಕೆ ತೋರುತ್ತದೆ. ಆದರೆ ಅವರ ಅಭಿಪ್ರಾಯ ಹಾಗಲ್ಲ. ಇದು ಮುಂದಿನ ಗ್ರಂಥಭಾಗಗಳಲ್ಲಿ ಸ್ಪಷ್ಟವಾಗಿ ಗೊತ್ತಾಗಲಿದೆ. ಒಬ್ಬ ವ್ಯಕ್ತಿಯು - ಈ ಜನ್ಮದಲ್ಲಾದರೂ ಸರಿ, ಹಿಂದಿನ ಜನ್ಮದಲ್ಲಾದರೂ ಸರಿ - ಕರ್ಮದ ಮೂಲಕವೇ ಜ್ಞಾನವನ್ನು ಪಡೆಯಬೇಕು. ಅಂಥ ಜ್ಞಾನವೇ ಮೋಕ್ಷಕ್ಕೆ ಹೇತು. ಕರ್ಮಜ್ಞಾನಗಳೆರಡೂ ಅತ್ಯಂತ ಅವಶ್ಯಕ ಎಂಬುದೇ ಅಗಸ್ತಿ ಮುನಿಗಳ ಮಾತಿನ ತಾತ್ಪರ್ಯ.
ಇದನ್ನು ಸ್ಪಷ್ಟಪಡಿಸಲು ಅವರು ಒಂದು ಕಥೆಯನ್ನು ಸುತೀಕ್ಷ್ಣನಿಗೆ ಹೇಳಲು ಪ್ರಾರಂಭಿಸುತ್ತಾರೆ. ಅಗ್ನಿವೇಶ್ಯನೆಂಬ ಬ್ರಾಹ್ಮಣನ ಮಗನಾದ ‘ಕಾರುಣ್ಯ’ ಎಂಬ ವೇದ-ವೇದಾಂಗಗಳನ್ನೆಲ್ಲ ತಿಳಿದಿರುವ ವಿದ್ವಾಂಸನಿದ್ದ. ಕಾರುಣ್ಯನು ಗುರುಕುಲದಲ್ಲಿ ವೇದ-ವೇದಾಂಗಗಳ ಅಧ್ಯಯನವನ್ನು ಪೂರೈಸಿ ಆಗತಾನೇ ಹಿಂದಿರುಗಿ ಬಂದಿದ್ದಾನೆ. ಅವನನ್ನು ತಂದೆಯಾದ ಅಗ್ನಿವೇಶ್ಯರು ಗಮನಿಸಿದಾಗ ಕಂಡುಬಂದ ಸಂಗತಿಯೇನೆಂದರೆ, ಆತ ಯಾವ ಕರ್ಮಾಚರಣೆಯನ್ನೂ ಮಾಡುತ್ತಿಲ್ಲ, ಉಪಾಸನೆಯನ್ನೂ ಮಾಡುತ್ತಿಲ್ಲ. ಈ ಸ್ಥಿತಿಯಲ್ಲಿರುವ ಮಗನನ್ನು ಕುರಿತು ಅಗ್ನಿವೇಶ್ಯರು ತಿಳಿವಳಿಕೆ ಹೇಳಲು ಪ್ರಾರಂಭ ಮಾಡುತ್ತಾರೆ. ಆ ತಿಳಿವಳಿಕೆಯೂ ಕೂಡ ಕಥಾರೂಪದಲ್ಲಿಯೇ ಇದೆ. ಅದನ್ನು ಮುಂದಿನ ಲೇಖನದಲ್ಲಿ ಗಮನಿಸಬಹುದು.
like 0 Comment 0
Share on Google+
ಯೋಗವಾಸಿಷ್ಠ  ಯೋಗವಾಸಿಷ್ಠ 1
ಯೋಗವಾಸಿಷ್ಠದ ಪೀಠಿಕೆ - ೧
ವಾಸಿಷ್ಠರಾಮಾಯಣವೆಂದು ಪ್ರಸಿದ್ಧವಾಗಿರುವ ಯೋಗವಾಸಿಷ್ಠವೆಂಬ ಯೋಗಗ್ರಂಥವನ್ನು ಕುರಿತಾಗಿ ನಾವೀಗ ಚಿಂತನೆಯನ್ನು ಪ್ರಾರಂಭಿಸಿದ್ದೇವೆ. ಇಷ್ಟು ದಿನಗಳ ಕಾಲ ಶ್ರೀ ಭಗವದ್ಗೀತೆಯನ್ನು ಕುರಿತಾಗಿ ಚಿಂತನೆ ನಡೆಸಿದ್ದಾಗಿದೆ. ಈಗ ಭಗವದ್ಗೀತೆಯ ವಿಸ್ತೃತರೂಪದಂತಿರುವ ಯೋಗವಾಸಿಷ್ಠವನ್ನು ಕುರಿತು ಚಿಂತನೆ ಮಾಡೋಣ. ಯದ್ಯಪಿ ಯೋಗವಾಸಿಷ್ಠವು ಸಾಂಪ್ರದಾಯಿಕರ ದೃಷ್ಟಿಯಲ್ಲಿ ಭಗವದ್ಗೀತೆಗಿಂತಲೂ ಪ್ರಾಚೀನವಾದದ್ದು. ಆದ್ದರಿಂದ ಭಗವದ್ಗೀತೆಯ ವಿಸ್ತಾರವೇ ಯೋಗವಾಸಿಷ್ಠವೆಂದು ಹೇಳುವುದು ತಾರ್ಕಿಕವಾಗಿ ತಪ್ಪಾಗುತ್ತದೆ. ಆದರೂ ಭಗವದ್ಗೀತೆಯಲ್ಲಿ ಹೇಳಿರುವ ಅನೇಕ ವಿಷಯಗಳು ಅದೇ ರೀತಿಯಲ್ಲಿಯೇ ಯೋಗವಾಸಿಷ್ಠದಲ್ಲಿಯೂ ಹೇಳಲ್ಪಟ್ಟಿವೆ. ಆದರೆ ಕಥೆಗಳ ಮೂಲಕ ತತ್ವನಿರೂಪಣೆ ಯೋಗವಾಸಿಷ್ಠದ ವಿಶೇಷ. ಅಲ್ಲದೇ ವಿಸ್ತಾರವಾಗಿ ಇಲ್ಲಿ ವಿಷಯನಿರೂಪಣೆ ಇದೆ. ಈ ಅರ್ಥದಲ್ಲಿ ಭಗವದ್ಗೀತೆಯ ವಿಸ್ತಾರವೇ ಯೋಗವಾಸಿಷ್ಠವೆಂದು ಭಾವಿಸಿದರೆ ತಪ್ಪೇನಿಲ್ಲ. ಅಂತೆಯೇ ಯೋಗವಾಸಿಷ್ಠವು ಭಗವದ್ಗೀತೆಗಿಂತಲೂ ಅನಂತರ ಕಾಲದಲ್ಲಿ ರಚಿತವಾದದ್ದು ಎಂಬುದಾಗಿ ಆಧುನಿಕ ವಿಮರ್ಶಕರು ಅಭಿಪ್ರಾಯಪಡುತ್ತಾರೆ. ಭಗವದ್ಗೀತೆಗೂ ಮತ್ತು ಯೋಗವಾಸಿಷ್ಠಕ್ಕೂ ತಾಯಿ ಒಬ್ಬಳೇ. ಅಂದರೆ ವೇದಾಂತಗಳೇ ಭಗವದ್ಗೀತೆಗೂ ಮೂಲ ಆಕರ, ಯೋಗವಾಸಿಷ್ಠಕ್ಕೂ ಮೂಲ ಆಕರ. ಈ ಕಾರಣದಿಂದ ಅನೇಕ ಸಂಗತಿಗಳು ಭಗವದ್ಗೀತೆಯಲ್ಲಿಯೂ, ಯೋಗವಾಸಿಷ್ಠದಲ್ಲಿಯೂ ಸಮಾನವಾಗಿರುತ್ತವೆ.
ಭಗವದ್ಗೀತೆಗೂ, ಯೋಗವಾಸಿಷ್ಠಕ್ಕೂ ಇರುವ ಇನ್ನೊಂದು ಸಾಮ್ಯವೇನೆಂದರೆ, ಭಗವದ್ಗೀತೆಯಲ್ಲಿ ಅರ್ಜುನನಿಗೆ ವಿಷಾದ ಉಂಟಾದಾಗ ಶ್ರೀಕೃಷ್ಣನು ಉಪದೇಶ ಮಾಡಿದಂತೆಯೇ, ಯೋಗವಾಸಿಷ್ಠದಲ್ಲಿ ಖಿನ್ನನಾಗಿರುವ ಶ್ರೀ ರಾಮಚಂದ್ರನಿಗೆ ವಸಿಷ್ಠರು ಉಪದೇಶ ನೀಡಿದರು. ಮನಸ್ಸಿನಲ್ಲಿ ವೈರಾಗ್ಯ ಉಂಟಾದಾಗಲೇ ಧರ್ಮಸೂಕ್ಷ್ಮವನ್ನು ಅಥವಾ ವೇದಾಂತವನ್ನು ತಿಳಿದುಕೊಳ್ಳುವ ತೀವ್ರ ಆಸಕ್ತಿ ಹುಟ್ಟಿಕೊಳ್ಳುತ್ತದೆ. ಪರೀಕ್ಷಿತರಾಜನು ತನಗೆ ಮರಣ ಸಂನಿಹಿತವಾಗಿರುವುದನ್ನು ಖಚಿತಪಡಿಸಿಕೊಂಡು ಪ್ರಾಯೋಪವೇಶವನ್ನು ಕೈಗೊಂಡನು. ಮರಣವನ್ನು ಕುರಿತಾಗಿ ಆತನಿಗೆ ತುಂಬಾ ಆತಂಕವಿತ್ತು. ಆದ್ದರಿಂದಲೇ ಆತ ಬ್ರಹ್ಮರ್ಷಿಗಳನ್ನು ಕರೆಸಿಕೊಂಡು ತನ್ನ ಆತಂಕವನ್ನು ನಿವೇದಿಸಿಕೊಂಡ, ಮರಣವನ್ನು ಎದುರಿಸುವ ಕ್ರಮ ಏನೆಂಬುದನ್ನು ತಿಳಿಸಿಕೊಡಬೇಕಾಗಿ ವಿನಂತಿಸಿಕೊಂಡ. ಮರಣದ ಗುಟ್ಟನ್ನು ಹೇಳಬೇಕಾದರೆ ಸಮಸ್ತ ಅಧ್ಯಾತ್ಮವನ್ನೂ ಹೇಳಬೇಕಾಗುತ್ತದೆ. ಹೀಗೆ ಹೊರಬಂದಿದ್ದು ‘ಶ್ರೀಮದ್ಭಾಗವತ’ ಎಂಬ ಪರಮಹಂಸಸಂಹಿತೆ. ಹೀಗೆಯೇ ಅರ್ಜುನನಿಗೆ ತೀವ್ರ ವಿಷಾದ ಉಂಟಾದಾಗ ಅದನ್ನು ನಿವಾರಿಸಲು ಬರಬೇಕಾಯಿತು ಭಗವದ್ಗೀತೆ. ಅರ್ಜುನನ ವಿಷಾದವೂ ಕೂಡ ವೈರಾಗ್ಯದ ಒಂದು ಮುಖವೇ ಆಗಿದೆ. ಪರಿಪೂರ್ಣ ವೈರಾಗ್ಯವೆಂದು ಅದನ್ನು ಒಪ್ಪಲು ಸಾಧ್ಯವಿಲ್ಲವಾದರೂ, ವೈರಾಗ್ಯದ ಒಂದು ಮುಖ ಅದರೊಳಗೆ ಇದೆ. ಹಾಗೆಯೇ ಶ್ರೀ ರಾಮಚಂದ್ರನು ನಿರ್ವಿಣ್ಣನಾಗಿ ಕುಳಿತಾಗ ಯೋಗವಾಸಿಷ್ಠ ಬರಬೇಕಾಯಿತು. ಅಂತೂ ಯೋಗವಾಸಿಷ್ಠವು ವೇದಾಂತಶಾಸ್ತ್ರ ಮತ್ತು ಯೋಗಶಾಸ್ತ್ರಗಳಲ್ಲಿ ಉಪನಿಷತ್ತು, ಭಗವದ್ಗೀತೆ, ಶ್ರೀಮದ್ಭಾಗವತಗಳಿಗೆ ಸರಿಸಮವಾಗಿ ನಿಲ್ಲುವ ಮೌಲಿಕವಾದ ಗ್ರಂಥ.
‘ಯತಃ ಸರ್ವಾಣಿ ಭೂತಾನಿ ಪ್ರತಿಭಾಂತಿ ಸ್ಥಿತಾನಿ ಚ | ಯತ್ರೈವೋಪಶಮಂ ಯಾಂತಿ ತಸ್ಮೈ ಸತ್ಯಾತ್ಮನೇ ನಮಃ ||’ (ಯೋ.ವಾ-೧) ಯೋಗವಾಸಿಷ್ಠದ ಪೀಠಿಕೆಯು ಒಂದು ಕಥೆಯಿಂದ ಪ್ರಾರಂಭವಾಗುತ್ತದೆ. ಆ ಕಥೆಯ ಪೂರ್ವದಲ್ಲಿ ಪರಬ್ರಹ್ಮನನ್ನು ಸತ್ಯ, ಜ್ಞಾನ, ಆನಂದಾತ್ಮಕವಾಗಿ ವರ್ಣಿಸಲಾಗಿದೆ. ಎಲ್ಲ ಲೋಕಗಳೂ ಯಾವ ಪರಬ್ರಹ್ಮವಸ್ತುವಿನಲ್ಲಿ ಹುಟ್ಟಿಕೊಂಡಿವೆಯೋ, ಮುಂದೆ ಅದೇ ಪರಬ್ರಹ್ಮವಸ್ತುವಿನಲ್ಲಿ ಲಯವಾಗುತ್ತವೆ. ಆದ್ದರಿಂದ ಲೋಕಗಳು ಹುಟ್ಟುವುದಕ್ಕಿಂತ ಮೊದಲೂ, ಹುಟ್ಟಿದ ನಂತರವೂ ಮತ್ತು ನಾಶಗೊಂಡ ಅನಂತರವೂ - ಮೂರೂ ಕಾಲದಲ್ಲಿಯೂ ಅದು ಇದ್ದಿರುತ್ತದೆ. ಇದನ್ನೇ ತ್ರಿಕಾಲ ಅಬಾಧಿತ ಎಂಬುದಾಗಿ ಕರೆಯುತ್ತಾರೆ. ಇದೇ ಪರಬ್ರಹ್ಮನ ಸತ್ಯತ್ವ.
‘ಜ್ಞಾತಾ ಜ್ಞಾನಂ ತಥಾ ಜ್ಞೇಯಂ ದ್ರಷ್ಟಾ ದರ್ಶನದೃಶ್ಯಭೂಃ | ಕರ್ತಾ ಹೇತುಃ ಕ್ರಿಯಾ ಯಸ್ಮಾತ್ ತಸ್ಮೈ ಜ್ಞಪ್ತ್ಯಾತ್ಮನೇ ನಮಃ ||’ (ಯೋ.ವಾ-೨) ಪ್ರತಿಯೊಬ್ಬ ಜೀವಿಯಲ್ಲಿಯೂ ಕಂಡುಬರುವ ಜ್ಞಾನಶಕ್ತಿಗೆ ಪರಬ್ರಹ್ಮವಸ್ತುವೇ ಮೂಲ. ಇಷ್ಟೊಂದು ಕೋಟಿ ಜೀವಗಳಿಗೆ ಜ್ಞಾನಶಕ್ತಿಯನ್ನು ನೀಡಬೇಕಾದರೆ, ಆ ಮೂಲವಸ್ತುವು ಜ್ಞಾನಸಾಗರವೇ ಆಗಿರಬೇಕು. ಇದೇ ಇಲ್ಲಿ (ಎರಡನೇ ಶ್ಲೋಕದಲ್ಲಿ ಹೇಳಿರುವಂತೆ) ಪರಬ್ರಹ್ಮದ ಜ್ಞಾನಸ್ವರೂಪ. ಜ್ಞಾನಶಕ್ತಿಯ ಮೂಲದಿಂದಲೇ ಕ್ರಿಯಾಶಕ್ತಿ ಹುಟ್ಟಿಕೊಳ್ಳುತ್ತದೆ. ಅದನ್ನೂ ಇಲ್ಲಿ ಉಲ್ಲೇಖಿಸಲಾಗಿದೆ.
ಯೋಗವಾಸಿಷ್ಠವನ್ನು ಕುರಿತಾಗಿ ಅಧ್ಯಯನ-ಬರಹಗಳನ್ನು ಮಾಡಬೇಕೆಂಬುದು ಬಹಳ ದಿನಗಳ ಆಸೆಯಾಗಿತ್ತು. ಇದಕ್ಕೆ ಸಂಯುಕ್ತಕರ್ನಾಟಕ ದಿನಪತ್ರಿಕೆಯ ಕೋರಿಕೆಯೂ ಕೂಡ ಸೇರಿಕೊಂಡಿತು. ವೈದ್ಯ ಹೇಳಿದ್ದೂ ಹಾಲು-ಅನ್ನ, ರೋಗಿ ಬಯಸಿದ್ದೂ ಹಾಲು-ಅನ್ನ ಎಂಬಂತಾಯಿತು. ಇದರ ಜೊತೆಗೆ ಈ ಗ್ರಂಥವನ್ನು ಕುರಿತು ಬರೆಯಲು ಒಂದು ಅಭಿಮಾನವೂ ಕಾರಣವಾಗಿದೆ. ಯೋಗವಾಸಿಷ್ಠಕ್ಕೆ ಪ್ರಸಿದ್ಧವಾಗಿ ಶ್ರೀಮದಾನಂದಬೋಧೇಂದ್ರ ಸರಸ್ವತಿಗಳ ವ್ಯಾಖ್ಯಾನವಿದೆ. ಈ ಆನಂದಬೋಧೇಂದ್ರರ ಬಗ್ಗೆ ವಿಮರ್ಶಕರು ಏನು ಹೇಳಿದ್ದಾರೋ ಗೊತ್ತಿಲ್ಲ. ಆದರೆ ಆನಂದಬೋಧೇಂದ್ರರೇ ಉಲ್ಲೇಖಿಸಿರುವಂತೆ, ಅವರ ಗುರುಗಳಾದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು, ಅವರ ಗುರುಗಳಾದ ಶ್ರೀ ರಾಮಚಂದ್ರ ಸರಸ್ವತಿಗಳು ಮತ್ತು ಅವರ ಗುರುಗಳಾದ ಶ್ರೀ ಸರ್ವಜ್ಞ ಸರಸ್ವತಿಗಳು ನಮ್ಮ ಗುರುಪರಂಪರೆಯಲ್ಲಿ ಬರುವ ಪೂರ್ವಿಕರೇ ಆಗಿದ್ದಾರೆಂಬುದು ನಮ್ಮ ದೃಢ ವಿಶ್ವಾಸ. ಏಕೆಂದರೆ ಈ ಹೆಸರುಗಳು ನಮ್ಮ ಮಠದ ಪರಂಪರೆಯಲ್ಲಿ ಬರುತ್ತವೆ. ಆದ್ದರಿಂದ ಆನಂದಬೋಧೇಂದ್ರರು ಯಾವ ರೀತಿಯಲ್ಲಿ ಯೋಗವಾಸಿಷ್ಠವನ್ನು ವ್ಯಾಖ್ಯಾನಿಸಿದ್ದಾರೋ, ಸಾಧ್ಯವಾದಷ್ಟು ಅದನ್ನು ಅವಲಂಬಿಸಿ ಈ ಲೇಖನಮಾಲೆಯನ್ನು ಬರೆಯಬೇಕೆಂಬುದು ನಮ್ಮ ಆಶಯ.
‘ಸ್ಫುರಂತಿ ಸ್ವೀಕರಾ ಯಸ್ಮಾತ್ ಆನಂದಾಸ್ಯಾಂಬರೇಽವನೌ | ಸರ್ವೇಷಾಂ ಜೀವನಂ ತಸ್ಮೈ ಬ್ರಹ್ಮಾನಂದಾತ್ಮನೇ ನಮಃ ||’ (ಯೋ.ವಾ-೩) ಎಲ್ಲ ಜೀವಿಗಳಲ್ಲಿಯೂ ಅನುಭವಗೋಚರವಾಗುವ ಎಲ್ಲ ವಿಧದ ಆನಂದಗಳಿಗೂ ಆ ಪರಬ್ರಹ್ಮವೇ ಮೂಲ. ‘ಏತಸ್ಯೈವ ಆನಂದಸ್ಯ ಅನ್ಯಾನಿ ಭೂತಾನಿ ಮಾತ್ರಾಮುಪಜೀವಂತಿ’ ಎಂಬುದಾಗಿ ಉಪನಿಷತ್ತು ಹೇಳುತ್ತದೆ. ಎಲ್ಲ ಜೀವಜಂತುಗಳಲ್ಲಿರುವ ಆನಂದಗಳಿಗೂ ಅದೇ ಮೂಲವಸ್ತು ಎಂದಾದ ಮೇಲೆ ಅದು ಆನಂದಸಾಗರವಾಗಿರಲೇಬೇಕು. ಹೀಗೆ ಪರಬ್ರಹ್ಮವು ಸತ್ಯ-ಜ್ಞಾನ-ಆನಂದಸ್ವರೂಪವಾಗಿದೆ ಎಂಬುದನ್ನು ಆರಂಭದ ಮೂರು ಶ್ಲೋಕಗಳಲ್ಲಿ ವರ್ಣಿಸಲಾಗಿದೆ. ಇದಾದ ನಂತರ ಪೀಠಿಕಾ ಕಥೆ ಆರಂಭವಾಗುತ್ತದೆ.
like 4 Comment 0
Share on Google+
This website can be best viewed Google Crome,Firefox, Internet Explorer 9 and above.
Designed & Maintained By hk-ngtech.com

© All rights reserved