ಯೋಗಪ್ರಕಾಶಿಕೆ  ಯೋಗಪ್ರಕಾಶಿಕೆ - ೩
ನೋಡುಗನ ನಿಜಸ್ಥಿತಿ
ಯೋಗ ಶಬ್ದದ ಅರ್ಥವೇನೆಂಬುದನ್ನು ಹಿಂದಿನ ಲೇಖನದಲ್ಲಿ ಗಮನಿಸಿದ್ದೇವೆ. ಚಿತ್ತ‘ವೃತ್ತಿ’ಗಳ ನಿಗ್ರಹವೇ ಯೋಗ. ನಿರ್ವಿಕಲ್ಪಕಸಮಾಧಿಸ್ಥಿತಿಯಲ್ಲಿ ಚಿತ್ತದ ಎಲ್ಲ ‘ವೃತ್ತಿ’ಗಳೂ ಲಯಗೊಂಡಿರುತ್ತವೆ. ಈ ಅರ್ಥದಲ್ಲಿ ನಿರ್ವಿಕಲ್ಪಕಸಮಾಧಿಯೇ ನಿಜವಾದ ಯೋಗ. ಯಮ, ನಿಯಮಗಳಿಂದ ಮೊದಲ್ಗೊಂಡು ಸವಿಕಲ್ಪಕಸಮಾಧಿಯವರೆಗೆ ಎಲ್ಲವೂ ನಿರ್ವಿಕಲ್ಪಕಸಮಾಧಿಗೆ ಸಾಧನ ಅಥವಾ ಅಂಗಗಳಾಗಿವೆ.
ಇಲ್ಲೊಂದು ಸಂಗತಿ ಗಮನಾರ್ಹವಾಗಿದೆ. ಚಿತ್ತದ ಎಲ್ಲ ‘ವೃತ್ತಿ’ಗಳೂ ಲಯಗೊಂಡಿರುವ ಈ ಸ್ಥಿತಿಯನ್ನು ಏಕಾಗ್ರತೆಯ ಮೂಲಕವೇ ಸಾಧಿಸಬೇಕೇ ಹೊರತು, ಬೇರೆ ವಿಧದಿಂದ ಅಲ್ಲ. ಅಂದರೆ ಗಾಢನಿದ್ರೆಯಲ್ಲಿ ಚಿತ್ತದ ಎಲ್ಲ ‘ವೃತ್ತಿ’ಗಳೂ ಲಯಗೊಂಡಿರುತ್ತವೆ. ಮೂರ್ಛೆಯಲ್ಲಿಯೂ ಚಿತ್ತದ ಎಲ್ಲ ‘ವೃತ್ತಿ’ಗಳೂ ಲಯಗೊಂಡಿರುತ್ತವೆ. ಆದರೆ ಇವುಗಳು ಸಮಾಧಿಸ್ಥಿತಿಯಲ್ಲ. ಏಕೆಂದರೆ ಇವುಗಳನ್ನು ಏಕಾಗ್ರತೆಯ ಮೂಲಕ ಸಾಧಿಸುವಂತಿಲ್ಲ. ಏಕಾಗ್ರತೆಯು ಧ್ಯಾನ, ಧಾರಣಾ ಮತ್ತು ಸವಿಕಲ್ಪಕಸಮಾಧಿ ಎಂಬುದಾಗಿ ಮೂರು ಸೋಪಾನಗಳಿಂದ ಕೂಡಿದೆ. ಈ ಸೋಪಾನಗಳ ಮೂಲಕವೇ ಚಿತ್ತ‘ವೃತ್ತಿ’ಗಳ ಲಯದ ಪ್ರಕ್ರಿಯೆ ನಡೆಯಬೇಕಾಗುತ್ತದೆ. ಏಕಾಗ್ರತೆಯ ಈ ಮೂರು ಸೋಪಾನಗಳು ಸತ್ವಗುಣದ ಉತ್ಕರ್ಷದಿಂದ ಬರುತ್ತವೆ. ಸಾಧನೆಯ ಮೂಲಕ ತಮೋಗುಣ ಮತ್ತು ರಜೋಗುಣಗಳನ್ನು ಕಡಿಮೆ ಮಾಡುತ್ತಾ, ಸತ್ವಗುಣವನ್ನು ಉತ್ತೇಜಿಸುತ್ತಾ ಬಂದಾಗ, ಧಾರಣಾ, ಧ್ಯಾನ, ಸಮಾಧಿಗಳು ಉಂಟಾಗುತ್ತವೆ. ಆದ್ದರಿಂದ ಸಂಪೂರ್ಣ ಚಿತ್ತ‘ವೃತ್ತಿ’ಗಳ ನಿಗ್ರಹವು ಸತ್ವಗುಣದ ಮೂಲಕ ಉಂಟಾದಾಗಲೇ, ಅದು ಸಮಾಧಿ ಅಥವಾ ಯೋಗ ಎನ್ನಿಸುವುದು. ಗಾಢನಿದ್ರೆಯಲ್ಲಿ ತಮೋಗುಣದ ಮೂಲಕ ‘ವೃತ್ತಿ’ಗಳು ಲಯಗೊಂಡಿರುತ್ತವೆ. ಮೂರ್ಛೆಯಲ್ಲಿ ತೀವ್ರವಾದ ಆಘಾತ ಅಥವಾ ತೀಕ್ಷ್ಣವಾದ ರಾಸಾಯನಿಕಗಳ (ಉದಾ: ಅನೆಸ್ಥೇಶಿಯಾ) ಮೂಲಕ ಚಿತ್ತವು ಎಲ್ಲ ‘ವೃತ್ತಿ’ಗಳೊಂದಿಗೆ ತಮೋಗುಣದಲ್ಲಿ ಲೀನವಾಗಿರುತ್ತದೆ. ಆದ್ದರಿಂದ ಸಮಾಧಿಸ್ಥಿತಿಗೂ ಮತ್ತು ಗಾಢನಿದ್ರೆ-ಮೂರ್ಛೆಗಳಿಗೂ ಮಹದಂತರವಿದೆ.
ಅಂತೂ ಏಕಾಗ್ರತೆಯಿಂದ ಉಂಟಾದ ಚಿತ್ತ‘ವೃತ್ತಿ’ನಿರೋಧವೇ ಯೋಗ. ಚಿತ್ತ‘ವೃತ್ತಿ’ನಿರೋಧವಾದಾಗ ಏನಾಗುತ್ತದೆ? ಆತ್ಮನು ಕೇವಲ ‘ದ್ರಷ್ಟೃ’ಸ್ವರೂಪದಲ್ಲಿ ನಿಂತಿರುತ್ತಾನೆ. ಈ ಸಂಗತಿಯನ್ನು ‘ತದಾ ದ್ರಷ್ಟುಃ ಸ್ವರೂಪೇ ಅವಸ್ಥಾನಮ್’ ಎಂಬ ಮೂರನೇ ಸೂತ್ರವು ಹೇಳುತ್ತಿದೆ. ಚಿತ್ತ‘ವೃತ್ತಿ’ನಿರೋಧವಾಗಿರುವಾಗ, ಅಂದರೆ ಸಮಾಧಿಸ್ಥಿತಿಯಲ್ಲಿ ‘ದ್ರಷ್ಟಾ’ ಎಂದರೆ ನೋಡುವವನಾದ ಆತ್ಮನು ತನ್ನ ನಿಜಸ್ವರೂಪದಲ್ಲಿ ನಿಂತಿರುತ್ತಾನೆ. ಇದರರ್ಥ - ಉಳಿದೆಲ್ಲ ಅವಸ್ಥೆಗಳಲ್ಲಿಯೂ ಅವನು ತನ್ನ ನಿಜಸ್ವರೂಪದಲ್ಲಿ ನಿಂತಿರುವುದಿಲ್ಲ. ಹಾಗಿದ್ದರೆ ಉಳಿದ ಅವಸ್ಥೆಗಳಲ್ಲಿ ಆತ ಏನಾಗಿರುತ್ತಾನೆ? ಇದನ್ನು ಮುಂದಿನ (ನಾಲ್ಕನೇ) ಸೂತ್ರವು ಹೇಳುತ್ತದೆ - ‘ವೃತ್ತಿಸಾರೂಪ್ಯಮಿತರತ್ರ’, ಉಳಿದೆಲ್ಲ ಅವಸ್ಥೆಗಳಲ್ಲಿಯೂ ಅವನಿಗೆ ‘ವೃತ್ತಿ’ಗಳು ಅಂಟಿಕೊಂಡಿರುತ್ತವೆ. ಗಾಢನಿದ್ರೆಯಲ್ಲಿ, ಸ್ವಪ್ನದಲ್ಲಿ, ಜಾಗೃತ್ ಅವಸ್ಥೆಯಲ್ಲಿ, ಈ ಮೂರೂ ಅವಸ್ಥೆಗಳಲ್ಲಿ ಅವನು ‘ವೃತ್ತಿ’ಗಳೊಡನೆ ಕಟ್ಟುಬಿದ್ದಿರುತ್ತಾನೆ. ಅಂದರೆ ಚಿತ್ತವು ಒಂದಿಲ್ಲೊಂದು ‘ವೃತ್ತಿ’ಯನ್ನು ಉಂಟುಮಾಡುತ್ತಲೇ ಇರುತ್ತದೆ. ಒಂದು ಕ್ಷಣವೂ ಸುಮ್ಮನೇ ಇರುವುದಿಲ್ಲ. ಇಂದ್ರಿಯಗಳ ಮೂಲಕ ಹೊರಪ್ರಪಂಚವನ್ನು ನೋಡುತ್ತಿರುವಾಗ ಒಂದು ವಿಧದ ‘ವೃತ್ತಿ’ಗಳಿರುತ್ತವೆ. ಇಂದ್ರಿಯಗಳು ಉಪಸಂಹಾರಗೊಂಡಿರುವಾಗ (ಸ್ವಪ್ನದಲ್ಲಿ) ಅಂತಃಕರಣದೊಳಗೇ ‘ವೃತ್ತಿ’ಗಳುಂಟಾಗುತ್ತವೆ. ಗಾಢನಿದ್ರೆಯಲ್ಲಿ ನಿದ್ರೆ ಎಂಬ ‘ವೃತ್ತಿ’ಯಲ್ಲಿ ಅಂತಃಕರಣವಿರುತ್ತದೆ. ಇದು ತಮೋಗುಣದ ‘ವೃತ್ತಿ’. ನಾನಾವಿಧದ ‘ವೃತ್ತಿ’ಗಳು ಉಂಟಾಗಿರುವಾಗ ಆತ್ಮನು ಅವುಗಳಂತೆಯೇ ಆಗಿಬಿಡುತ್ತಾನೆ. ಇದುವೇ ಈ ಸೂತ್ರದಲ್ಲಿ ಹೇಳಿದ ‘ಸಾರೂಪ್ಯ’. ಉದಾಹರಣೆಗೆ - ಸರೋವರದ ನೀರಿನಲ್ಲಿ ಚಂದ್ರನ ಪ್ರತಿಬಿಂಬವು ಬೀಳುತ್ತಿರುತ್ತದೆ. ಸರೋವರದಲ್ಲಿ ತರಂಗಗಳು ಉಂಟಾದಾಗ, ನೀರು ಚಂಚಲವಾಗಿರುವಾಗ ಚಂದ್ರಬಿಂಬವೂ ಚಂಚಲವಾಗಿರುವಂತೆಯೇ ಕಾಣುತ್ತದೆ. ಹಾಗೆಯೇ ಅಂತಃಕರಣದ ‘ವೃತ್ತಿ’ಗಳೇ ತಾನಾಗಿರುವಂತೆ ತೋರುತ್ತದೆ. ಇದು ತೋರಿಕೆಯೇ ಹೊರತು ನಿಜವಲ್ಲ. ಸ್ಫಟಿಕದ ಶುದ್ಧಸ್ವರೂಪವು (ಕೆಂಪು) ದಾಸವಾಳ ಹೂವಿನ ಜೊತೆ ಇಟ್ಟಾಗ ಕೆಂಪಾಗಿಯೇ ತೋರುತ್ತದೆ. ಹಾಗೆಯೇ ಇದೂ ಕೂಡ.
ಸಮಾಧಿಸ್ಥಿತಿಯಲ್ಲಿ ತನ್ನ ಮೂಲಸ್ವರೂಪದಲ್ಲಿ ಚೇತನನು ನಿಂತಿರುತ್ತಾನೆ. ಅವನನ್ನು ಪತಂಜಲಿಗಳು ‘ದ್ರಷ್ಟಾ’ ಎಂದು ಕರೆದು, ತನ್ನ ಸ್ವರೂಪದಲ್ಲಿ ನಿಂತಿರುತ್ತಾನೆ ಎಂದಿದ್ದಾರೆ. ಅಂದರೆ ಅವನ ದ್ರಷ್ಟೃತ್ವವು ಹಾಗೆಯೇ ಇರುತ್ತದೆ. ದ್ರಷ್ಟಾ ಎಂದರೆ ನೋಡುವವ. ದ್ರಷ್ಟೃತ್ವವೆಂದರೆ ನೋಡುತ್ತಿರುವಿಕೆ. ಇದು ಚೇತನದ ಸ್ವರೂಪ, ಚೇತನನ ಚೈತನ್ಯ. ನೋಡುತ್ತಿರುವಿಕೆ ಅಥವಾ ದ್ರಷ್ಟೃತ್ವವು ಅವನಿಗಿದ್ದರೂ, ಅವನಲ್ಲಿ ಯಾವುದೇ ವೃತ್ತಿಗಳಿರುವುದಿಲ್ಲ. ಎಲ್ಲ ವೃತ್ತಿಗಳೂ ಲಯವಾಗಿರುತ್ತವೆ. ಯಾವುದೇ ನೋಡಲ್ಪಡುವ ವಸ್ತು (ದೃಶ್ಯ) ಅಲ್ಲಿ ಅವನಿಗಿರುವುದಿಲ್ಲ. ಆದ್ದರಿಂದ ತನಗಿಂತ ಬೇರೆಯಾದ ವಸ್ತುವಿನ ಕುರಿತ ಜ್ಞಾನ (ವೃತ್ತಿ) ಅವನಿಗಿರುವುದಿಲ್ಲ. ಆದರೆ ತಾನೇ ತಾನಾಗಿರುತ್ತಾನೆ. ಅವನ ಚೈತನ್ಯ ಒಂದೇ ರೀತಿಯಲ್ಲಿರುತ್ತದೆ. ಉಪನಿಷತ್ತು ಇದನ್ನು ಹೀಗೆ ಹೇಳುತ್ತದೆ; - ‘ನಹಿ ದ್ರಷ್ಟುಃ ದೃಷ್ಟೇಃ ವಿಪರಿಲೋಪೋ ವಿದ್ಯತೇ ಅವಿನಾಶಿತ್ವಾತ್, ನ ತು ದ್ವಿತೀಯಮಸ್ತಿ ತತೋಽನ್ಯತ್ ವಿಭಕ್ತಂ ಯತ್ ಪಶ್ಯೇತ್’ ‘ನಹಿ ಘ್ರಾತುಃ ಘ್ರಾತೇಃ ವಿಪರಿಲೋಪೋ ವಿದ್ಯತೇ’ ಮುಂತಾಗಿ. ಇದರ ಅರ್ಥ; - ಸಮಾಧಿಸ್ಥಿತಿಯಲ್ಲಿರುವಾಗ ಆತ್ಮನ ನೋಡುವ ಶಕ್ತಿ ಸ್ಪಷ್ಟವಾಗುವುದಿಲ್ಲ, ಆಘ್ರಾಣಿಸುವ (ಮೂಸಿ ನೋಡಿ ವಾಸನೆಯನ್ನು ಗುರುತಿಸುವ) ಶಕ್ತಿ ಸ್ಪಷ್ಟವಾಗುವುದಿಲ್ಲ, ರುಚಿನೋಡುವ ಶಕ್ತಿ ಸ್ಪಷ್ಟವಾಗುವುದಿಲ್ಲ, ವಾಕ್‌ಶಕ್ತಿ ಸ್ಪಷ್ಟವಾಗುವುದಿಲ್ಲ, ಶ್ರವಣಶಕ್ತಿ ಸ್ಪಷ್ಟವಾಗುವುದಿಲ್ಲ, ಮನನಶಕ್ತಿ ಸ್ಪಷ್ಟವಾಗುವುದಿಲ್ಲ, ಸ್ಪರ್ಶಶಕ್ತಿ ಸ್ಪಷ್ಟವಾಗುವುದಿಲ್ಲ, ವಿಜ್ಞಾನ (ಬುದ್ಧಿ) ಶಕ್ತಿ ಸ್ಪಷ್ಟವಾಗುವುದಿಲ್ಲ. ಅಂದರೆ ಎಲ್ಲ ಇಂದ್ರಿಯ, ಮನಸ್ಸು, ಬುದ್ಧಿಗಳ ಮೂಲಕ ಸಂವೇದನೆಯನ್ನುಂಟುಮಾಡುವ ಚೈತನ್ಯಶಕ್ತಿ ಆರಿಹೋಗುವುದಿಲ್ಲ. ಆದರೆ ಆ ಸ್ಥಿತಿಯಲ್ಲಿ ಸಂವೇದನೆಯನ್ನು ಆತ ಉಂಟುಮಾಡುತ್ತಿರುವುದಿಲ್ಲ. ಏಕೆಂದರೆ ಎಲ್ಲ ಸಂವೇದನೆಗಳನ್ನೂ ಸಾಧನೆಗಳ ಮೂಲಕ ಆತ ಬಿಡುತ್ತಾ ಬಂದಿದ್ದಾನೆ, ಎಲ್ಲ ವೃತ್ತಿಗಳನ್ನೂ ಬಿಡುತ್ತಾ ಬಂದಿದ್ದಾನೆ. ಸಂವೇದನೆಗಳು ಉಂಟಾಯಿತೆಂದರೆ ಅಂತಃಕರಣದಲ್ಲಿ ‘ವೃತ್ತಿ’ಗಳು ಪ್ರಾರಂಭವಾಗುತ್ತವೆ. ಅಂತಃಕರಣದಲ್ಲಿ ವೃತ್ತಿ ಪ್ರಾರಂಭವಾಯಿತೆಂದರೆ ನಿರ್ವಿಕಲ್ಪಕಸಮಾಧಿಯಿಂದ ಈಚೆಗೆ ಬರುವಿಕೆ ಪ್ರಾರಂಭವಾಯಿತೆಂದು ಅರ್ಥ. ಸವಿಕಲ್ಪಕಸಮಾಧಿ ಅಥವಾ ಸ್ವಪ್ನ ಅಥವಾ ಜಾಗೃತ್ ಅವಸ್ಥೆಗಳಿಗೆ ಮುಂದೆ ಅವನು ಬರುತ್ತಾನೆ. ಒಟ್ಟಾರೆ ಯಾವ ಸಂವೇದನೆಗಳನ್ನೂ ಅಥವಾ ‘ವೃತ್ತಿ’ಗಳನ್ನೂ ಉಂಟುಮಾಡಿಕೊಳ್ಳದೇ, ಕೇವಲ ತಾನಾಗಿಯೇ ಇರುವ ಚೇತನದ ಸ್ಥಿತಿಯೇ ಸ್ವರೂಪಸ್ಥಿತಿ. ಇದೇ ‘ಯೋಗ’ ಶಬ್ದದ ಪರಮಾರ್ಥ.
ಇಲ್ಲಿ ಚಿತ್ತವೆಂದರೇನೆಂಬುದನ್ನೂ ಪತಂಜಲಿಮಹರ್ಷಿಗಳು ಪರೋಕ್ಷವಾಗಿ ಹೇಳಿದ್ದಾರೆ. ನಿರ್ವಿಕಲ್ಪಕಸಮಾಧಿಸ್ಥಿತಿಯಲ್ಲಿ ಇಲ್ಲದ್ದಾಗಿ ಮತ್ತು ಉಳಿದ ಅವಸ್ಥೆಗಳಲ್ಲಿ ಇದ್ದದ್ದಾಗಿ ತೋರುವ ಚೈತನ್ಯದ ಒಂದು ವಿಶಿಷ್ಟ ಅಭಿವ್ಯಕ್ತಸ್ವರೂಪವೇ ಚಿತ್ತ, ಅಂತಃಕರಣ.
like 0 Comment 0
Share on Google+
ಯೋಗಪ್ರಕಾಶಿಕೆ  2
ಯೋಗಪ್ರಕಾಶಿಕೆ - ೨ ಯೋಗವೆಂದರೇನು?
‘ಅಥ ಯೋಗಾನುಶಾಸನಮ್’ ಎಂಬುದು ಯೋಗಶಾಸತ್ರದ ಮೊದಲನೇ ಸೂತ್ರ. ಶಾಸ್ತ್ರದ ಆರಂಭದಲ್ಲಿ ಮಂಗಲಾಚರಣೆ ಎಂಬುದು ಶಿಷ್ಟರ ಸಂಪ್ರದಾಯ. ಮಂಗಲಾಚರಣೆ ಎಂದರೆ ಗ್ರಂಥರಚನೆಯಲ್ಲಿ ಬರಬಹುದಾದ ವಿಘ್ನಗಳನ್ನು ಪರಿಹರಿಸಿಕೊಳ್ಳುವುದಕ್ಕೋಸ್ಕರ ದೇವರಲ್ಲಿ ಪ್ರಾರ್ಥನೆ ಮಾಡುವಿಕೆ. ಸಮಸ್ತ ಅಮಂಗಲಗಳನ್ನು ನಿವಾರಣೆ ಮಾಡಿ ಗ್ರಂಥವು ಚೆನ್ನಾಗಿ ಪೂರ್ಣಗೊಳ್ಳುವಂತೆ ಮಾಡುವುದೇ ಮಂಗಲಾಚರಣೆಯ ಪ್ರಯೋಜನ. ಇಲ್ಲಿ ‘ಅಥ’ ಎಂಬ ಶಬ್ದವೇ ಮಂಗಲಾಚರಣೆ. ‘ಅಥ’ ಶಬ್ದದ ಉಚ್ಚಾರಣೆಯೇ ಅಮಂಗಲಗಳನ್ನು ನಿವಾರಿಸುತ್ತದೆ. ‘ಓಂಕಾರಶ್ಚಾಥಶಬ್ದಶ್ಚ ದ್ವಾವೇತೌ ಬ್ರಹ್ಮಣಃ ಪುರಾ| ಕಂಠಂ ಭಿತ್ವಾ ವಿನಿರ್ಯಾತೌ ತಸ್ಮಾನ್ಮಾಂಗಲಿಕಾವುಭೌ||’ ‘ಓಂಕಾರ’ ಮತ್ತು ‘ಅಥ’ ಶಬ್ದ ಇವೆರಡೂ ಸೃಷ್ಟಿಯ ಆದಿಯಲ್ಲಿ ಬ್ರಹ್ಮನ ಕಂಠದಿಂದ ಹೊರಹೊಮ್ಮಿದವು. ಆದ್ದರಿಂದ ಇವೆರಡೂ ಶಬ್ದಗಳೂ ಮಂಗಲವನ್ನುಂಟುಮಾಡುವ ಶಬ್ದಗಳು. ಈ ಸೂತ್ರದ ಆರಂಭದಲ್ಲಿ ‘ಅಥ’ ಎಂಬುದಾಗಿ ಉಚ್ಚರಿಸಿರುವುದರಿಂದ, ಇದೇ ಮಂಗಲಾಚರಣೆ. ‘ಅಥ’ ಶಬ್ದವು ಜೊತೆಯಲ್ಲಿ ಇನ್ನೊಂದು ಅರ್ಥವನ್ನು ಕೊಡುತ್ತದೆ. ‘ಆರಂಭ’ ಎಂಬ ಅರ್ಥವನ್ನೂ ಅದು ಕೊಡುತ್ತದೆ. ‘ಯೋಗಶಾಸ್ತ್ರ ಇದೀಗ ಆರಂಭವಾಗುತ್ತಿದೆ’ ಎಂಬುದು ಸೂತ್ರಾರ್ಥ. ಯಾವ ಪ್ರಯೋಜನಕ್ಕೋಸ್ಕರ ಆರಂಭವಾಗುತ್ತಿದೆ? ಪುರುಷಾರ್ಥಸಾಧನೆಗೋಸ್ಕರ. ಮುಖ್ಯವಾಗಿ ಮೋಕ್ಷವೇ ಪುರುಷಾರ್ಥ. ಏಕೆಂದರೆ ಅದು ಶಾಶ್ವತ, ಅದು ನಿರತಿಶಯವಾದ ಆನಂದ. ಆದರೂ ಧರ್ಮ, ಅರ್ಥ, ಕಾಮಗಳಿಗೂ ಯೋಗಶಾಸ್ತ್ರವು ಸಾಧನವಾಗಬಲ್ಲದು. ಎಲ್ಲ ಪುರುಷಾರ್ಥಸಾಧನೆಗೂ ಬೇಕಾಗುವ ಶರೀರ, ಮನಸ್ಸುಗಳ ಸ್ವಾಸ್ಥ್ಯ, ಏಕಾಗ್ರತೆಗಳನ್ನು ಯೋಗಶಾಸ್ತ್ರವು ನೀಡುತ್ತದೆ. ಅಷ್ಟೇ ಅಲ್ಲದೇ ಲೌಕಿಕವಾಗಿ ಅನೇಕ ವಿಧದ ಸಾಧನೆಗಳಲ್ಲಿ ಯೋಗಶಾಸ್ತ್ರವು ಉತ್ತೇಜನಕಾರಿಯಾಗಿದೆ. ಏಕೆಂದರೆ ಎಲ್ಲ ಸಾಧನೆಗಳಿಗೂ ಬೇಕಾಗುವ ಶರೀರ-ಮನಸ್ಸುಗಳ ಸ್ವಾಸ್ಥ್ಯ ಮತ್ತು ಏಕಾಗ್ರತೆಗಳನ್ನು ಅದು ನೀಡುತ್ತದೆ.
ಯೋಗ ಎಂದರೆ ಈ ಹಿಂದಿನ ಲೇಖನದಲ್ಲಿ ಹೇಳಿದಂತೆ, ಮನಸ್ಸಿನ ಸಮಾಧಾನ, ಅರ್ಥಾತ್ ಏಕಾಗ್ರತೆ. ಸಮಾಧಿಯೇ ನಿಜವಾಗಿ ‘ಯೋಗ’ ಶಬ್ದದ ಅರ್ಥ. ಈ ಬಗ್ಗೆ ವಿವರಣೆಯನ್ನು ಮುಂದಿನ ಎರಡು ಸೂತ್ರಗಳು ನೀಡಲಿವೆ. ‘ಅನುಶಾಸನ’ ಎಂದರೆ ಶಾಸ್ತ್ರ. ಯೋಗದ ಲಕ್ಷಣ, ಸ್ವರೂಪ, ಸಾಧನ, ಫಲ ಮುಂತಾದವುಗಳನ್ನು ಯಾವ ಗ್ರಂಥವು ಹೇಳುತ್ತದೆಯೋ, ಅದುವೇ ಯೋಗಶಾಸ್ತ್ರ. ಅದನ್ನು ಉಪದೇಶಿಸಲು ಪ್ರಾರಂಭಿಸುತ್ತಿರುವುದಾಗಿ ಪತಂಜಲಿಮಹರ್ಷಿಗಳು ಈ ಮೂರು ಸೂತ್ರದ ಮೂಲಕ ಹೇಳಿದ್ದಾರೆ.
‘ಯೋಗಶ್ಚಿತ್ತವೃತ್ತಿನಿರೋಧಃ’ ಎಂಬ ಎರಡನೇ ಸೂತ್ರವು ಯೋಗವೆಂದರೇನೆಂಬುದನ್ನು ಹೇಳುತ್ತಿದೆ. ಅಂತಃಕರಣದ ‘ವೃತ್ತಿ’ಗಳ ನಿಗ್ರಹವೇ ‘ಯೋಗ’. ‘ವೃತ್ತಿ’ಗಳೆಂದರೆ ಅಂತಃಕರಣದಲ್ಲಿ ಉಂಟಾಗುವ ತರಂಗಗಳು. ಒಂದು ವಿಷಯವನ್ನು ನೋಡಿದಾಗ ಮನಸ್ಸು ಮೊದಲಿಗಿಂತ ಬೇರೆ ಆಗುತ್ತದೆ. ಮೊದಲು ಆ ವಿಷಯದ ಜ್ಞಾನವಿರಲಿಲ್ಲ. ಬೇರೆ ಯಾವುದೋ ಜ್ಞಾನವಿತ್ತು. ಈಗ ಈ ವಿಷಯವನ್ನು ನೋಡಿದಾಗ, ಈ ವಿಷಯದ ಜ್ಞಾನವು ಮನಸ್ಸಿನಲ್ಲಿ ಬಂದಿದೆ. ಇದೇ ಬದಲಾವಣೆ. ವಿಷಯದ ಜ್ಞಾನವೇ ತರಂಗ. ಬೇರೆ ಬೇರೆ ವಿಷಯಗಳನ್ನು ನೋಡಿದಾಗ, ಬೇರೆ ಬೇರೆ ತರಂಗಗಳು ಮನಸ್ಸಿನಲ್ಲಿ ಮೂಡುತ್ತವೆ. ಏಕೆಂದರೆ ಆಯಾ ವಿಷಯದ ಚಿತ್ರ ಮನಸ್ಸಿನಲ್ಲಿ ಬೀಳುತ್ತದೆ. ಈ ತರಂಗಗಳನ್ನು ‘ವೃತ್ತಿ’ಗಳೆಂದು ಶಾಸ್ತ್ರದಲ್ಲಿ ಕರೆಯುತ್ತಾರೆ. ವಸ್ತುವನ್ನು ನೋಡಿದಾಗ, ಮಾತನ್ನು ಕೇಳಿದಾಗ ಹಿಂದಿನ ಘಟನೆಗಳ ಸ್ಮರಣೆಯಾಗುವಾಗ, ಭವಿಷ್ಯತ್ತಿನ ಬಗ್ಗೆ ಚಿಂತಿಸುವಾಗ, ಆಸೆ ಮಾಡುವಾಗ, ಅಸೂಯೆ ಪಡುವಾಗ, ಹೀಗೆ ಒಂದೊಂದು ಸಂದರ್ಭದಲ್ಲಿಯೂ ಅಂತಃಕರಣದಲ್ಲಿ ‘ವೃತ್ತಿ’ಗಳು ಉಂಟಾಗಿರುತ್ತವೆ. ಅಂತಃಕರಣದಲ್ಲಿ ಅನಂತ ‘ವೃತ್ತಿ’ಗಳಿವೆ. ಭೂಮಿಯಲ್ಲಿರುವ ಎಲ್ಲ ಮಣ್ಣಿನ ಕಣಗಳನ್ನು ಎಣಿಸಿಬಿಡಬಹುದೇನೋ!, ಅಂತಃಕರಣದಲ್ಲಿರುವ ‘ವೃತ್ತಿ’ಗಳನ್ನು ಎಣಿಸಲು ಸಾಧ್ಯವಿಲ್ಲ!. ಅಂತಃಕರಣದಲ್ಲಿ ಲೆಕ್ಕವಿಲ್ಲದಷ್ಟು ‘ವೃತ್ತಿ’ಗಳಿದ್ದರೂ, ಅವುಗಳನ್ನು ಐದು ವಿಧವಾಗಿ ವಿಂಗಡಿಸುತ್ತಾರೆ. ಮುಂದೆ ಐದು ಮತ್ತು ಆರನೆಯ ಸೂತ್ರಗಳಲ್ಲಿ ಐದು ಪ್ರಕಾರದ ‘ವೃತ್ತಿ’ಗಳನ್ನು ಹೇಳುತ್ತಾರೆ. ಪ್ರಮಾಣ-ವಿಪರ್ಯಯ-ವಿಕಲ್ಪ-ನಿದ್ರೆ ಮತ್ತು ಸ್ಮೃತಿ ಎಂಬುದಾಗಿ ‘ವೃತ್ತಿ’ಗಳು ಐದು ಪ್ರಕಾರ. ಈ ಎಲ್ಲ ‘ವೃತ್ತಿ’ಗಳ ನಿಗ್ರಹವೇ ಯೋಗ. ಯೋಗಶಾಸ್ತ್ರವು ನಿದ್ರೆಯನ್ನೂ ಒಂದು ‘ವೃತ್ತಿ’ ಎಂದು ಹೇಳುತ್ತದೆ. ನಿದ್ರೆಯೂ ಸೇರಿದಂತೆ ಎಲ್ಲ ‘ವೃತ್ತಿ’ಗಳನ್ನೂ ದಾಟಿದ ಸ್ಥಿತಿಯೇ ಯೋಗ.
‘ವೃತ್ತಿ’ಗಳನ್ನು ದಾಟಿ ನಿಲ್ಲುವುದು ಸುಲಭದ ಮಾತಲ್ಲ. ಅದಕ್ಕೆ ವಿಶೇಷವಾದ ಪ್ರಯತ್ನ ಅಗತ್ಯ. ಶರೀರ, ಇಂದ್ರಿಯ, ಮನಸ್ಸುಗಳ ವಿಜ್ಞಾನವನ್ನು ಅರಿತು ಪ್ರಯತ್ನಿಸುವುದು ಅಗತ್ಯ. ಋಷಿಗಳು ಶರೀರೇಂದ್ರಿಯಮನಸ್ಸುಗಳ ಮತ್ತು ಪ್ರಾಣಗಳ ವಿಜ್ಞಾನವನ್ನು ಚೆನ್ನಾಗಿ ಅರಿತಿದ್ದರೆಂಬುದು ಅವರ ಗ್ರಂಥಗಳಿಂದ ಗೊತ್ತಾಗುತ್ತದೆ. ಅವರು ಕೊಟ್ಟ ವಿಜ್ಞಾನದ ಹಿನ್ನೆಲೆಯಲ್ಲಿ ಬಂದಿರುವ ಸೂಕ್ಷ್ಮ ಪ್ರಯತ್ನದಿಂದ ಮೇಲೆ ಹೇಳಿದ ಯೋಗವನ್ನು ಸಾಧಿಸಬೇಕಾಗುತ್ತದೆ.
ಭೋಜರಾಜನು ಇನ್ನೂ ಒಂದು ಹೆಜ್ಜೆ ಮುಂದೆ ಹೋಗುತ್ತಾನೆ. ‘ವೃತ್ತಿ’ಗಳನ್ನು ನಿಗ್ರಹಿಸಲು ಅತೀಂದ್ರಿಯವಾದ ಪ್ರಯತ್ನವಿಶೇಷವು ಅಗತ್ಯವಿದೆ ಎಂಬುದು ಅವನ ಮಾತು. ಈ ಮಾತು ಸತ್ಯವಾಗಿದೆ. ಏಕೆಂದರೆ ಅಂತಃಕರಣದ ಚಂಚಲತೆಯ ಕಾರಣ ತುಂಬಾ ಸೂಕ್ಷ್ಮವಾದದ್ದು, ಅತೀಂದ್ರಿಯವಾದದ್ದು. ಅನೇಕ ಜನ್ಮಗಳಿಂದ ಬಂದಿರುವ ಸೂಕ್ಷ್ಮ ಸಂಸ್ಕಾರಗಳು ಸೂಕ್ಷ್ಮ ಮನಸ್ಸಿನಲ್ಲಿ ಶೇಖರಣೆಗೊಂಡಿರುತ್ತವೆ. ಈ ಸೂಕ್ಷ್ಮ ಸಂಸ್ಕಾರಗಳನ್ನು ಬದಲಾಯಿಸಲು, ಅಥವಾ ಹೋಗಲಾಡಿಸಲು ಸೂಕ್ಷ್ಮ ಪ್ರಯತ್ನವೇ ಬೇಕಾಗುತ್ತದೆ. ಈ ಸೂಕ್ಷ್ಮ ಪ್ರಯತ್ನಗಳ ಬಗ್ಗೆ ಮುಂದೆ (ಎರಡನೇ ಪಾದದ ಹತ್ತು, ಹನ್ನೆರಡನೇ ಸೂತ್ರಗಳಲ್ಲಿ) ಸೂತ್ರಕಾರರೇ ಹೇಳಲಿದ್ದಾರೆ. ಈ ಸಂದರ್ಭದಲ್ಲಿ ಶ್ವೇತಾಶ್ವತರೋಪನಿಷತ್ತು ಹೇಳುವ ಒಂದು ವಾಕ್ಯವನ್ನು ನೆನಪಿಸಿಕೊಳ್ಳಬಹುದು. ‘ಅಗ್ನಿರ್ಯತ್ರಾಭಿಮಥ್ಯತೇ ವಾಯುರ್ಯತ್ರಾಭಿಯುಜ್ಯತೇ ಸೋಮೋ ಯತ್ರಾತಿರಿಚ್ಯತೇ ತತ್ರ ಸಂಜಾಯತೇ ಮನಃ’ ಎಲ್ಲಿ ಅಗ್ನಿಯು ಮಥಿಸಲ್ಪಡುವುದೋ, ಎಲ್ಲಿ ವಾಯುವು ಯೋಗದ ನಿಯಮಕ್ಕೆ ಒಳಪಡಿಸಲ್ಪಡುವುದೋ, ಮತ್ತು ಎಲ್ಲಿ ಸೋಮವು ಉಳಿದುಕೊಳ್ಳುವುದೋ, ಅಲ್ಲಿ ಯೋಗಕ್ಕೆ ಬೇಕಾದ ಮನಃಸ್ಥಿತಿ ಉಂಟಾಗುತ್ತದೆ. ಅಗ್ನಿಯ ಮಥನ ಮತ್ತು ಸೋಮರಸಗಳು ಯಜ್ಞದಲ್ಲಿ ಇರುತ್ತವೆ. ವಾಯುವನ್ನು ನಿಯಮಿಸುವಿಕೆ ಪ್ರಾಣಾಯಾಮದಲ್ಲಿರುತ್ತದೆ. ಯಜ್ಞಗಳ ಆಚರಣೆಯಿಂದ ಮನಸ್ಸಿನ ಸೂಕ್ಷ್ಮ ಪಾಪಸಂಸ್ಕಾರಗಳು ತೊಳೆದುಹೋದಾಗ ಚಿತ್ತವು ಶುದ್ಧವಾಗುತ್ತದೆ. ಶುದ್ಧವಾದ ಚಿತ್ತವು ಸುಲಭವಾಗಿ ಏಕಾಗ್ರತೆಗೊಂಡು ಸಮಾಧಿಸ್ಥಿತಿಯತ್ತ ಸಾಗುತ್ತದೆ. ಹಾಗೆಯೇ ಪ್ರಾಣಾಯಾಮಗಳನ್ನು ದೀರ್ಘಕಾಲ, ಚೆನ್ನಾಗಿ ಅಭ್ಯಾಸ ಮಾಡಿದಾಗ ಸೂಕ್ಷ್ಮ ಕಲ್ಮಷಗಳು ತೊಳೆದುಹೋಗಿ ಏಕಾಗ್ರತೆ ಉಂಟಾಗುತ್ತದೆ, ಕ್ರಮೇಣ ಸಮಾಧಿಸ್ಥಿತಿಯತ್ತ ಸಾಗುತ್ತದೆ. ಇದು ಈ ವಾಕ್ಯದ ತಾತ್ಪರ್ಯ. ಚಿತ್ತದ ‘ವೃತ್ತಿ’ಗಳನ್ನು ನಿಗ್ರಹಿಸಲು ಅತೀಂದ್ರಿಯವಾದ ಅಥವಾ ಸೂಕ್ಷ್ಮವಾದ ಪ್ರಯತ್ನ ಅಗತ್ಯವೆಂಬ ಭೋಜರಾಜನ ಮಾತಿಗೆ ಈ ವಾಕ್ಯವು ಆಧಾರವಾಗಬಲ್ಲದು. ಅಂತೂ ಯಮ, ನಿಯಮ, ಆಸನ ಮುಂತಾದ ಸ್ಥೂಲ ಪ್ರಯತ್ನಗಳ ಜೊತೆಗೆ, ಸೂಕ್ಷ್ಮ ಪ್ರಯತ್ನವಿದ್ದಾಗಲೇ ಚಿತ್ತವೃತ್ತಿನಿರೋಧ ಸಾಧ್ಯವಾಗುತ್ತದೆ.
ಚಿತ್ತವೃತ್ತಿನಿರೋಧವನ್ನು ಇನ್ನೊಂದು ವಿಧದಲ್ಲಿ ಹೇಳುತ್ತಾರೆ. ಚಿತ್ತಕ್ಕೆ ಐದು ಭೂಮಿಕೆಗಳು ಇರುತ್ತವೆ. ೧)ಕ್ಷಿಪ್ತ - ರಜೋಗುಣದಿಂದಾಗಿ ವಿಷಯಾಕರ್ಷಣೆಯ ಚಂಚಲತೆಗೆ ಒಳಗಾಗಿರುವ ಸ್ಥಿತಿ. ೨) ಮೂಢ - ತಮೋಗುಣದಿಂದಾಗಿ ನಿದ್ರೆ, ಆಲಸ್ಯ, ಪ್ರಮಾದಗಳಿಗೆ ಒಳಗಾಗಿರುವ ಸ್ಥಿತಿ. ೩) ವಿಕ್ಷಿಪ್ತ - ಸ್ವಲ್ಪಮಟ್ಟಿನ ಸಾಧನೆಯಿಂದಾಗಿ ಕೆಲವೊಮ್ಮೆ ಧ್ಯಾನದ ಸ್ಥಿತಿಗೂ, ಕೆಲವೊಮ್ಮೆ ಚಂಚಲತೆಯ ಸ್ಥಿತಿಗೂ ಮನಸ್ಸು ಒಳಗಾಗುತ್ತದೆ. ಅಥವಾ ಕೆಲವೊಮ್ಮೆ ಕ್ಷಣಿಕ ನಿದ್ರೆಯ ಸ್ಥಿತಿಗೂ ಹೋಗುತ್ತದೆ. ಇದು ಗುಣಗಳ ಮಿಶ್ರಣ ಸ್ಥಿತಿ. ೪) ಏಕಾಗ್ರ - ದೀರ್ಘಕಾಲ ಅಭ್ಯಾಸದಿಂದ ರಜೋಗುಣ, ತಮೋಗುಣಗಳೆರಡೂ ಕಳೆದು, ಸತ್ವಗುಣದಲ್ಲಿ ನಿಂತಿರುವ ಮನಸ್ಸಿನ ಸ್ಥಿತಿ. ೫) ನಿರುದ್ಧ - ಏಕಾಗ್ರತೆಗಿಂತಲೂ ಮುಂದುವರೆದು, ಎಲ್ಲ ವೃತ್ತಿಗಳೂ ಲಯಗೊಂಡಿರುವ ಸ್ಥಿತಿ, ಅಥವಾ ಸಮಾಧಿಸ್ಥಿತಿ. ಈ ಐದು ಭೂಮಿಕೆಗಳಲ್ಲಿ ಮೊದಲ ಮೂರು ಭೂಮಿಕೆಗಳನ್ನು ಬಿಡುತ್ತಾ, ಕೊನೆಯ ಎರಡು ಭೂಮಿಕೆಗಳಲ್ಲಿ ನಿಲ್ಲುವ ಪ್ರಯತ್ನವಾಗಬೇಕು. ಈ ಪ್ರಯತ್ನವೇ ಚಿತ್ತವೃತ್ತಿನಿರೋಧ.
like 1 Comment 0
Share on Google+
ಯೋಗಪ್ರಕಾಶಿಕೆ  1
ಯೋಗಪ್ರಕಾಶಿಕೆ 1
ಭರತಭುವಿಯಿದು ಯೋಗಿಗಳ ತವರೂರು. ವಿಶ್ವಕ್ಕೆ ಯೋಗದ ಸಂದೇಶವನ್ನು ನೀಡಿದ ಅನೇಕ ಯೋಗಿವರೇಣ್ಯರು ಈ ಭೂಮಿಯಲ್ಲಿ ಹುಟ್ಟಿಬಂದಿದ್ದಾರೆ, ತಮ್ಮ ಅನುಭವಕ್ಕೆ ಗೋಚರಿಸಿದ ಸತ್ಯಗಳನ್ನು ಪ್ರಪಂಚಕ್ಕೆ ಗ್ರಂಥಗಳರೂಪದಲ್ಲಿ ಕೊಟ್ಟಿದ್ದಾರೆ. ಶ್ರೀ ಪತಂಜಲಿಮಹರ್ಷಿಗಳು ಅಂಥವರಲ್ಲಿ ಅಗ್ರಗಣ್ಯರು. ಭಗವಂತನ ಒಂದು ಅಂಶವಾಗಿರುವ ಆದಿಶೇಷನ ಅವತಾರವೇ ಶ್ರೀ ಪತಂಜಲಿಮಹರ್ಷಿಗಳು. ಅವರು ಯೋಗಸೂತ್ರಗಳನ್ನು ರಚಿಸಿದರು. ‘ಯೋಗದರ್ಶನ’ ಎಂಬುದಾಗಿ ದರ್ಶನಗಳ ಸಾಲಿನಲ್ಲಿ ಅವರು ಬರೆದ ಯೋಗಸೂತ್ರಗಳು ಪ್ರಸಿದ್ಧವಾಗಿವೆ. ವೇದ-ಉಪನಿಷತ್ತುಗಳಲ್ಲಿ ಹೇಳಲ್ಪಟ್ಟ ವಿಷಯಗಳನ್ನೇ ಅವರು ಸಂಗ್ರಹವಾಗಿ ಸೂತ್ರಗಳಲ್ಲಿ ಪೊಣಿಸಿಟ್ಟಿದ್ದಾರೆ. ಇಂದಿನ ಕಾಲದಲ್ಲಿ ವೇದ-ಉಪನಿಷತ್ತುಗಳನ್ನು ಓದಿ, ಅರ್ಥಮಾಡಿಕೊಂಡು, ಅನುಷ್ಠಾನದಲ್ಲಿರಿಸಿ, ಸಾಧನಾಮಾರ್ಗದಲ್ಲಿ ಮುಂದುವರಿಯುವುದು ತುಂಬಾ ಕಷ್ಟಸಾಧ್ಯ. ವಿಷಯಗಳು ಅನಲ್ಪ, ಆಯುಷ್ಯ ಅಲ್ಪ. ಮನಸ್ಸು ಅತಿಚಂಚಲ. ಸತ್ಯ-ಧರ್ಮಗಳ ನಿಷ್ಠೆ ಕ್ಷೀಣಾವಸ್ಥೆಯಲ್ಲಿದೆ. ಈ ಸ್ಥಿತಿಯಲ್ಲಿರುವ ಜೀವಿಗಳನ್ನು ಉದ್ಧರಿಸುವುದಕ್ಕೋಸ್ಕರ ಅವತರಿಸಿದ ಶ್ರೀ ಪತಂಜಲಿಮಹರ್ಷಿಗಳು ವೇದ-ಉಪನಿಷತ್ತುಗಳ ಸಾರವಾಗಿರುವ ಅರ್ಥಗಳನ್ನು ವ್ಯವಸ್ಥಿತವಾಗಿ ಜೋಡಿಸಿ, ಸೂತ್ರಗಳ ರೂಪದಲ್ಲಿ ಬರೆದರು. ಈ ಸೂತ್ರಗಳಿಗೆ ವೇದವ್ಯಾಸರು ಭಾಷ್ಯವನ್ನು ಬರೆದರು. ಆ ಭಾಷ್ಯಕ್ಕೆ ಬೃಹಸ್ಪತಿಯ ಅವತಾರವೆನಿಸಿರುವ ವಾಚಸ್ಪತಿಮಿಶ್ರರು ವಾಖ್ಯಾನವನ್ನು ಬರೆದರು. ಸಂಸ್ಕೃತಸಾಹಿತ್ಯಕ್ಕೆ ಅನೇಕ ಕೊಡುಗೆಗಳನ್ನು ಕೊಟ್ಟವನೆಂದು ಪ್ರಸಿದ್ಧನಾದ ಭೋಜರಾಜನು ’ವೃತ್ತಿ’(ವಾಖ್ಯಾನ)ಯನ್ನು ಯೋಗಸೂತ್ರಗಳಿಗೆ ಬರೆದನು. ಇದನ್ನು ಗೊಲ್ಲಾಪಿಲ್ಲಿ ಅರುಣಾಚಲಶಾಸ್ತ್ರೀ ಎಂಬ ವಿದ್ವಾಂಸರು ಕನ್ನಡಕ್ಕೆ ಅನುವಾದಿಸಿದರು. ಈ ಅನುವಾದಕ್ಕೆ ’ಯೋಗಸೂತ್ರಾರ್ಥಪ್ರಕಾಶಿಕೆ’ ಎಂಬುದಾಗಿ ಹೆಸರು. ಈ ಅನುವಾದವು ಹಳೆಯ ಕನ್ನಡ ಭಾಷೆಯಲ್ಲಿದೆ. ಇದನ್ನು ಇಂದಿನ ಕನ್ನಡಭಾಷೆಗೆ ತಂದು, ಇಂದಿನ ಓದುಗರಿಗೆ ತಲುಪಿಸಬೇಕಾಗಿದೆ. ಯೋಗಸಾಧಕರಿಗೆ ಸಾಧನಾಮಾರ್ಗದಲ್ಲಿ ಮುಂದುವರಿಯಲು ಅನುಕೂಲವಾಗುವಂತೆ ’ಯೋಗಸೂತ್ರಾರ್ಥಪ್ರಕಾಶಿಕೆ’ಯನ್ನು ನೀಡಬೇಕಾಗಿದೆ. ಈ ಉದ್ದೇಶದಿಂದ ಅರುಣಾಚಲಶಾಸ್ತ್ರಿಯವರ ಅನುವಾದವನ್ನು ಆದರಿಸಿ ’ಯೋಗಸೂತ್ರಾರ್ಥ ಪ್ರಕಾಶಿಕೆ’ಯನ್ನು ಕನ್ನಡದಲ್ಲಿ ಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಈ ಲೇಖನಕ್ಕೆ ಚುಟುಕಾಗಿ ’ಯೋಗಪ್ರಕಾಶಿಕೆ’ ಎಂಬ ಹೆಸರನ್ನಿಟ್ಟುಕೊಂಡಿದ್ದೇವೆ.
ಅದೃಷ್ಟವಶಾತ್ ಈ ಪುಸ್ತಕದ ಹಸ್ತಪ್ರತಿಯು ನಮ್ಮ ಕೈಸೇರಿತು. ಸುಮಾರು ಹತ್ತು-ಹನ್ನೆರಡು ವರ್ಷಗಳ ಹಿಂದೆ ಸಾಗರ ಸಮೀಪದ ಕಾನ್ಲೆ ಶ್ರೀಧರ ಎಂಬುವವರು ಈ ಹಸ್ತಪ್ರತಿಯನ್ನು ನಮಗೆ ಕೊಟ್ಟರು. ಅವರ ತಂದೆಯವರಾದ ಕಾನ್ಲೆ ವೆಂಕಟಗಿರಿಯಪ್ಪನವರಿಗೆ ಈ ಹಸ್ತಪ್ರತಿಯು ಶಿಗೇಹಳ್ಳಿಯ ಮಹಾತಪಸ್ವಿ ಶ್ರೀ ಶಿವಾನಂದಸರಸ್ವತೀ ಯತಿಗಳಿಂದ ಆಶೀರ್ವಾದಪೂರ್ವಕವಾಗಿ ಕೊಡಲ್ಪಟ್ಟಿತ್ತು. ಶ್ರೀ ಶಿವಾನಂದಸರಸ್ವತಿಗಳಿಗೆ ಇದು ಅವರ ಗುರುಗಳಾದ ಶ್ರೀ ಪರಮಾನಂದರಿಂದ ಕೊಡಲ್ಪಟ್ಟಿತ್ತು. ಮತ್ತೂ ಹಿಂದೆ ಈ ಹಸ್ತಪ್ರತಿಯ ಇತಿಹಾಸ ನಮಗೆ ತಿಳಿಯದು. ಅಂತೂ ಮಹಾತ್ಮರ ಮೂಲದಿಂದ ಇದು ನಮಗೆ ದೊರಕಿತು. ಈ ಗ್ರಂಥವನ್ನು ಕನ್ನಡಿಗರಿಗೆ, ಸಾಧಕರಿಗೆ ನೀಡುವ ಉದ್ದೇಶದಿಂದಲೂ ಮತ್ತು ಸ್ವತಃ ಚೆನ್ನಾಗಿ ಚಿಂತನೆ ಮಾಡಿಕೊಳ್ಳುವ ಉದ್ದೇಶದಿಂದಲೂ ಈ ಲೇಖನವನ್ನು ಬರೆಯಲು ಪ್ರಾರಂಭಿಸಿದ್ದೇವೆ.
ಶ್ರೀ ಪತಂಜಲಿಮಹರ್ಷಿಗಳು ೧೯೫ ಸೂತ್ರಗಳಲ್ಲಿ ಯೋಗಶಾಸ್ತ್ರವನ್ನು ಸಂಗ್ರಹಿಸಿ ಇಟ್ಟಿರುತ್ತಾರೆ. ಅದನ್ನು ನಾಲ್ಕು ಪಾದಗಳಲ್ಲಿ ವಿಂಗಡಿಸಿದ್ದಾರೆ. - ಯೋಗಪಾದ, ಸಾಧನಾಪಾದ, ವಿಭೂತಿಪಾದ ಮತ್ತು ಕೈವಲ್ಯಪಾದ ಎಂಬುದಾಗಿ. ಈ ನಾಲ್ಕು ಹೆಸರುಗಳು ಅನ್ವರ್ಥಕನಾಮಗಳು. ಮೊದಲನೆಯ ಯೋಗಪಾದಕ್ಕೆ ಸಮಾಧಿಪಾದ ಎಂಬುದಾಗಿಯೂ ಹೆಸರುಂಟು. ಮೊದಲನೆಯ ಪಾದದಲ್ಲಿ ಶಾಸ್ತ್ರದ ಮುಖ್ಯ ವಿಷಯವಾಗಿರುವ ಯೋಗಗಳ, ಅಂದರೆ ಸಮಾಧಿಯ ಬಗ್ಗೆ ಹೇಳುತ್ತಾರೆ. ಯೋಗಶಬ್ಧಕ್ಕೆ ಸಮಾಧಿಯೇ ಮುಖ್ಯಾರ್ಥ. ಆ ಸ್ಥಿತಿಯನ್ನು ತಲುಪಲು ಬೇಕಾಗುವ ಸಾಧನಗಳಾದ ಯಮ, ನಿಯಮ ಮೊದಲಾದವುಗಳನ್ನು ಎರಡನೆಯದಾದ ಸಾಧನಾಪಾದವು ತಿಳಿಸಿಕೊಡುತ್ತದೆ. ಯೋಗಸಾಧನೆಯ ಪ್ರಗತಿಯ ಸೂಚಕಗಳಾದ ವಿಭೂತಿ ಅಥವಾ ಸಿದ್ಧಿಗಳನ್ನು ಕುರಿತಾಗಿ ಮೂರನೆಯದಾದ ವಿಭೂತಿಪಾದವು ಹೇಳುತ್ತದೆ. ಯೋಗದ ಕಟ್ಟಕಡೆಯ ಗುರಿಯಾದ ಮೋಕ್ಷವನ್ನು ಕೊನೆಯದಾದ ಕೈವಲ್ಯಪಾದವು ಹೇಳುತ್ತದೆ.
ಯೋಗಸೂತ್ರಗಳಿಗೆ ’ವೃತ್ತಿ’ (ವಾಖ್ಯಾನ) ಯನ್ನು ಬರೆದ ಭೋಜರಾಜನನ್ನು ಕುರಿತಾಗಿ ಕೆಲವು ಸಂಗತಿಗಳನ್ನು ಈಗ ಹೇಳೋಣ. ಸಂಸ್ಕೃತ ಸಾರಸ್ವತಲೋಕದಲ್ಲಿ ಭೋಜರಾಜನು ಚಿರಪರಿಚಿತ. ವ್ಯಾಕರಣ, ಸಂಸ್ಕೃತಶಾಸ್ತ್ರ, ಶೈವದರ್ಶನ, ಜ್ಯೋತಿಷ್ಯ, ವಾಸ್ತುಶಾಸ್ತ್ರ ಮತ್ತು ಯುದ್ಧವಿದ್ಯೆಗಳಲ್ಲಿ ಭೋಜರಾಜನು ಪರಿಣತನಾಗಿದ್ದುದಲ್ಲದೇ, ಈ ವಿಷಯಗಳಲ್ಲಿ ಗ್ರಂಥಗಳನ್ನೂ ಬರೆದಿದ್ದಾನೆ. ಧಾರಾನಗರದ ಒಡೆಯನಾಗಿದ್ದ ಭೋಜರಾಜನು ವಿಕ್ರಮ ಸಂವತ್ಸರ ೧೦೭೫ ರಿಂದ ೧೧೧೦ ರವರೆಗೆ ರಾಜ್ಯಭಾರ ಮಾಡಿದನೆಂದು ಇತಿಹಾಸಕಾರರು ಹೇಳುತ್ತಾರೆ. ಯೋಗಸೂತ್ರಗಳಿಗೆ ಇವನು ಬರೆದ ವೃತ್ತಿಯನ್ನು ‘ರಾಜಮಾರ್ತಾಂಡವೃತ್ತಿ’ ಎಂಬುದಾಗಿ ಕರೆಯಲಾಗಿದೆ. ಯೋಗಶಾಸ್ತ್ರದ ಸುಸ್ಪಷ್ಟ ಪರಿಪೂರ್ಣ ತಿಳಿವಳಿಕೆ ಭೋಜರಾಜನಿಗೆ ಇದ್ದದ್ದು ಈ ಗ್ರಂಥದಿಂದಲೇ ಚೆನ್ನಾಗಿ ಗೊತ್ತಾಗುತ್ತದೆ. ರಾಜನಾಗಿದ್ದು ಪಾಂಡಿತ್ಯವನ್ನು ಗಳಿಸಿದ್ದ ಈತನು ಯೋಗಸಾಧನೆಯಲ್ಲಿಯೂ ಸಾಕಷ್ಟು ಮುಂದುವರೆದಿದ್ದನೆಂದು ತೋರುತ್ತದೆ. ಯೋಗಸೂತ್ರದ ಪ್ರಾಚೀನ ವ್ಯಾಖ್ಯಾನಗಳಲ್ಲಿ ಒಂದಾದ ಭೋಜರಾಜವೃತ್ತಿಯನ್ನು ಕುರಿತು ಚಿಂತನೆ ಮಾಡುವ ಅವಕಾಶ ನಮಗೆ ದೊರೆತದ್ದು ಸೌಭಾಗ್ಯವೆಂದೇ ತೋರುತ್ತದೆ.
ಯೋಗವೆಂದರೇನು? ‘ಯುಜ-ಸಮಾಧೌ’ ಎಂಬ ಧಾತುವಿನಿಂದ ಯೋಗ ಶಬ್ದ ಹುಟ್ಟಿದೆ. ಮನಸ್ಸನ್ನು ಏಕಾಗ್ರಗೊಳಿಸುವಿಕೆ ಎಂಬುದಾಗಿ ಈ ಧಾತುವಿನ ಅರ್ಥ. ಮನಸ್ಸಿನ ಅತ್ಯಂತ ಏಕಾಗ್ರಸ್ಥಿತಿಯೇ ಯೋಗ. ಚಂಚಲವಾದ ಮನಸ್ಸು ಅನೇಕ ಜನ್ಮಗಳಿಂದ ಚಂಚಲತೆಯನ್ನು ತನ್ನ ಸ್ವಭಾವವನ್ನಾಗಿಸಿಕೊಂಡಿದೆ. ಅದರ ಚಂಚಲತೆಯನ್ನು ಅಭ್ಯಾಸ ಮತ್ತು ವೈರಾಗ್ಯಗಳಿಂದ ಹೋಗಲಾಡಿಸಬೇಕಾಗುತ್ತದೆ. ‘ಯುಜಿರ್-ಯೋಗೇ’ ಎಂಬ ಇನ್ನೊಂದು ಧಾತುವಿನಿಂದಲೂ ಯೋಗ ಶಬ್ದವು ಹುಟ್ಟುತ್ತದೆ. ಈ ಧಾತುವಿಗೆ ಕೂಡುವಿಕೆ ಎಂದು ಅರ್ಥ. ಆಗ ’ಚಿತ್ತ ವೃತ್ತಿ ನಿರೋಧ’ (ಮನಸ್ಸಿನ ವೃತ್ತಿಗಳನ್ನು ತಡೆಯುವಿಕೆ) ಎಂಬ ಸೂತ್ರಕಾರರ ವ್ಯಾಖ್ಯೆಯು ಸರಿಹೋಗುವುದಿಲ್ಲ ಎಂಬುದಾಗಿ ಆಕ್ಷೇಪ ಬರುತ್ತದೆ. ಇದಕ್ಕೆ ಸಮಾಧಾನ ಉಂಟು. ಸೂತ್ರಕಾರರು (ಪತಂಜಲಿ ಮಹರ್ಷಿಗಳು) ಬಳಸಿರುವ ನಿರೋಧ ಶಬ್ಧಕ್ಕೆ ತಡೆಯುವುದು ಅಥವಾ ನಾಶಪಡಿಸುವುದು ಎಂಬ ಅರ್ಥವಿದೆ. ಆದರೂ ಕೂಡುವಿಕೆ ಎಂಬ ಅರ್ಥವನ್ನು ಹೊಂದಿಸಬಹುದು. ಮನಸ್ಸಿನ ಸ್ಥೂಲವೃತ್ತಿಗಳನ್ನು ತಡೆಯುತ್ತಾ ಬಂದರೆ ಅಥವಾ ನಾಶಪಡಿಸುತ್ತಾ ಬಂದರೆ ಮನಸ್ಸು ಸೂಕ್ಷ್ಮವೃತ್ತಿಗಳನ್ನು ಪಡೆಯುತ್ತದೆ. ಸೂಕ್ಷ್ಮವೃತ್ತಿಗಳನ್ನು ಪಡೆಯುವಿಕೆಯನ್ನೇ ಸೂಕ್ಷ್ಮವೃತ್ತಿಗಳೊಂದಿಗೆ ಕೂಡುವಿಕೆಯೆಂಬುದಾಗಿ ಹೇಳಬಹುದು, ಅಥವಾ ಮೂಢ, ಕ್ಷಿಪ್ತ, ವಿಕ್ಷಿಪ್ತ, ಏಕಾಗ್ರ ಮತ್ತು ನಿರುದ್ಧ ಎಂಬ ಐದು ಚಿತ್ತಭೂಮಿಕೆಗಳ ಪೈಕಿ, ಹಿಂದಿನ ಚಿತ್ತಭೂಮಿಕೆಗಳನ್ನು ತಡೆದಾಗ, ಮುಂದಿನ ಭೂಮಿಕೆಗಳು ಉಂಟಾಗಲು ಪ್ರಾರಂಭವಾಗುತ್ತವೆ. ಮುಂದಿನ ಚಿತ್ತಭೂಮಿಕೆಯೊಂದಿಗೆ ಮನಸ್ಸು ಕೂಡಿಕೊಳ್ಳುತ್ತದೆ ಎಂಬುದಾಗಿ ಇದನ್ನು ಹೇಳಬಹುದು. ಆದ್ದರಿಂದ ಕೂಡುವಿಕೆ ಎಂಬ ಅರ್ಥದಲ್ಲಿ ಯೋಗ ಶಬ್ಧಾರ್ಥವನ್ನು ಹೇಳಿದರೂ ಸೂತ್ರಕಾರರು ಹೇಳಿದ ವ್ಯಾಖ್ಯೆಗೆ ಸರಿಹೊಂದಿಸಬಹುದು.
ಚಿತ್ತದ ಸ್ಥೂಲವೃತ್ತಿಗಳನ್ನು ತಡೆಯುತ್ತಾ ಬಂದಾಗ ಅಥವಾ ನಾಶಪಡಿಸುತ್ತಾ ಬಂದಾಗ ಧ್ಯಾನವೇ ಮೊದಲಾದ ಸೂಕ್ಷ್ಮವೃತ್ತಿಗಳು ಉಂಟಾಗುತ್ತವೆ ಅಥವಾ ಮೂಢಾದಿ ಐದು ಭೂಮಿಕೆಗಳಲ್ಲಿ ಹಿಂದಿನ ಭೂಮಿಕೆಗಳನ್ನು ತಡೆದಾಗ ಮುಂದಿನ ಭೂಮಿಕೆಗಳು ಉಂಟಾಗಲು ಪ್ರಾರಂಭವಾಗುತ್ತವೆ. ಈ ರೀತಿಯಲ್ಲಿ ಮುಂದುವರಿಯುತ್ತಾ ಹೋದಂತೆ ಎಲ್ಲ ವೃತ್ತಿಗಳೂ ನಾಶವಾಗಿ, ವೃತ್ತಿಗಳಿಗೆ ಕಾರಣವಾದ ಚಿತ್ತವು ಉಳಿದುಕೊಳ್ಳುತ್ತದೆ. ಆ ಚಿತ್ತವನ್ನೂ ನಿಗ್ರಹಿಸಿದಾಗ ಕೇವಲ ಸ್ವಸ್ವರೂಪನಾದ ಚಿನ್ಮಾತ್ರಪುರುಷನು ಉಳಿದುಕೊಳ್ಳುತ್ತಾನೆ. ಇದೇ ಸಂಪೂರ್ಣ ’ನಿರೋಧ’ದ ಸ್ಥಿತಿ. ಇದೇ ಯೋಗ ಶಬ್ಧದ ನಿಜಾರ್ಥ.
like 2 Comment 0
Share on Google+
This website can be best viewed Google Crome,Firefox, Internet Explorer 9 and above.
Designed & Maintained By hk-ngtech.com

© All rights reserved